ಯುವಜನತೆ ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಪಾಶ್ಚಿಮಾತ್ಯ ಜೀವನಶೈಲಿಗೆ ಮಾರುಹೋಗದೆ, ನಮ್ಮ ಸನಾತನ ಮೌಲ್ಯ, ಕುಟುಂಬ ವ್ಯವಸ್ಥೆ ಹಾಗೂ ವಸುಧೈವ ಕುಟುಂಬಕಂ ಎಂಬ ವಿಶಾಲ ಮನೋಭಾವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಹೇಳಿದರು.
ಕುಂದಾಪುರ : ಯುವಜನತೆ ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಪಾಶ್ಚಿಮಾತ್ಯ ಜೀವನಶೈಲಿಗೆ ಮಾರುಹೋಗದೆ, ನಮ್ಮ ಸನಾತನ ಮೌಲ್ಯ, ಕುಟುಂಬ ವ್ಯವಸ್ಥೆ ಹಾಗೂ ವಸುಧೈವ ಕುಟುಂಬಕಂ ಎಂಬ ವಿಶಾಲ ಮನೋಭಾವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಹೇಳಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಶಂಕರನಾರಾಯಣ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಯೋಗದಲ್ಲಿ ಶಂಕರನಾರಾಯಣದ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ದೇಶದ ಭವ್ಯ ಇತಿಹಾಸ, ನೃತ್ಯ, ಸಂಗೀತ, ಸಾಹಿತ್ಯ ಹಾಗೂ ಪರಂಪರೆಯನ್ನು ಪರಿಚಯಿಸುವ ಮಾಧ್ಯಮವಾಗಬೇಕು. ಯುವ ಸಮುದಾಯವು ವೈಜ್ಞಾನಿಕ ಮನೋಭಾವದ ಜೊತೆಗೆ ತಮ್ಮ ಸಾಂಸ್ಕೃತಿಕ ಬೇರುಗಳ ಬಗ್ಗೆ ಹೆಮ್ಮೆ ತಳೆದು, ಆಚರಣೆಗಳ ಹಿಂದಿನ ಅರ್ಥಪೂರ್ಣ ತತ್ವಗಳನ್ನು ಅರಿತು ಆಚರಿಸಿದಾಗ ಮಾತ್ರ ಭಾರತೀಯ ಸಂಸ್ಕೃತಿ ಜೀವಂತವಾಗಿ ಹಾಗೂ ನಿರಂತರವಾಗಿ ಮುಂದಿನ ಪೀಳಿಗೆಗೆ ಹರಿದುಬರಲು ಸಾಧ್ಯ ಎಂದರು.ಶಂಕರನಾರಾಯಣ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಪ್ಪ ಪೂಜಾರಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ದಿವ್ಯಾ ಎಂ, ಕಾಲೇಜಿನ ಅಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ.ನಳಿನಾಶ್ರೀ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಗಂಗಾಧರ ಆರ್ ಎಚ್ ನಿರೂಪಿಸಿದರು. ಜಾನಪದ ವೈವಿಧ್ಯ: ಕಾರ್ಯಕ್ರಮದಲ್ಲಿ ಶ್ಯಾಮ್ ಜಿ.ಎಸ್ ಪೂಜಾರಿ ಗಂಗೊಳ್ಳಿ ಇವರಿಂದ ಕೊಳಲು ವಾದನ, ಅನಿಲ್ ಬಿರ್ತಿ ಮತ್ತು ತಂಡದಿಂದ ವೀರಗಾಸೆ, ಪ್ರಶಾಂತ್ ಬಿರ್ತಿ ಮತ್ತು ತಂಡದಿಂದ ಕಂಸಾಳೆ, ಚೈತನ್ಯ ಮತ್ತು ತಂಡದಿಂದ ಜಾನಪದ ಸಂಗೀತ, ಸಾವಿತ್ರಿ ನೃತ್ಯ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ, ಕಾಲೇಜಿನ ಯಕ್ಷಗಾನ ತಂಡದಿಂದ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.