ವಿದ್ಯಾರ್ಥಿಗಳಿಗೆ ಸಂಸ್ಕಾರ-ಸಂಸ್ಕೃತಿ ಮುಖ್ಯ: ಕೆ.ಪಿ.ಬಾಬು

| Published : Jul 31 2024, 01:02 AM IST

ವಿದ್ಯಾರ್ಥಿಗಳಿಗೆ ಸಂಸ್ಕಾರ-ಸಂಸ್ಕೃತಿ ಮುಖ್ಯ: ಕೆ.ಪಿ.ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣುವುದು. ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು. ಓದಿನಲ್ಲಿ ಆಸಕ್ತಿಯನ್ನು ರೂಢಿಸಿಕೊಂಡು ಪ್ರತಿಭಾವಂತರಾಗುವ ಜೊತೆಗೆ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಸಂಸ್ಕಾರ-ಸಂಸ್ಕೃತಿಯನ್ನು ಚಿಕ್ಕಂದಿನಿಂದಲೇ ರೂಪಿಸಿಕೊಂಡಾಗ ಸನ್ನಡತೆಯುಳ್ಳ ವ್ಯಕ್ತಿಗಳಾಗಿ, ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ರಾಮನಗರ ಡಯಟ್‌ ಉಪನ್ಯಾಸಕ ಕೆ.ಪಿ.ಬಾಬು ತಿಳಿಸಿದರು.

ನಗರದ ಕಾರ್ಮೆಲ್‌ ಕಾನ್ವೆಂಟ್‌ನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿಂತನ-ಮಂಥನ, ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕೆಯತ್ತ ಹೆಚ್ಚು ಆಸಕ್ತಿ ವಹಿಸಬೇಕು. ನಿರಂತರ ಅಧ್ಯಯನಶೀಲರಾದಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ವಿವೇಚನಾ ಶಕ್ತಿಯನ್ನು ವೃದ್ಧಿಸಿಕೊಂಡು ವಿವೇಕವಂತರಾಗಿ ಜೀವನ ನಡೆಸಬೇಕು. ಒಳ್ಳೆಯ ಪುಸ್ತಕಗಳನ್ನು ಓದುವುದರೊಂದಿಗೆ ಜ್ಞಾನ ಸಂಪಾದನೆ ಮಾಡಿಕೊಂಡು ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವಂತೆ ಸಲಹೆ ನೀಡಿದರು.

ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣುವುದು. ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು. ಓದಿನಲ್ಲಿ ಆಸಕ್ತಿಯನ್ನು ರೂಢಿಸಿಕೊಂಡು ಪ್ರತಿಭಾವಂತರಾಗುವ ಜೊತೆಗೆ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

ವಿದ್ಯಾರ್ಥಿ ಜೀವನದ ಸಮಯದಲ್ಲಿ ನಿಮ್ಮಗಮನ ಓದಿನ ಕಡೆಗಷ್ಟೇ ಇರಬೇಕು. ಬೇರೆ ಕಡೆ ಗಮನಕೊಡಬಾರದು. ತಂದೆ-ತಾಯಿಗಳು ಮಕ್ಕಳ ಜೀವನದ ಬಗ್ಗೆ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಉದ್ದೇಶದಿಂದ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಅವರ ಶ್ರಮವನ್ನು ಸಾರ್ಥಕಗೊಳಿಸಬೇಕಾದದ್ದು ಮಕ್ಕಳ ಕರ್ತವ್ಯ ಎಂದರು.

ಧ್ಯಾನ, ಯೋಗ, ವ್ಯಾಯಾಮವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಇದರಿಂದ ಮನಸ್ಸು ಸದಾಕಾಲ ಉಲ್ಲಸಿತವಾಗಿರುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ನೆನಪಿನ ಶಕ್ತಿಯೂ ವೃದ್ಧಿಸುತ್ತದೆ. ಇವುಗಳೆಲ್ಲವೂ ಓದಿಗೆ ಹೆಚ್ಚು ಸಹಕಾರಿಯಾಗುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕ್ರಿಯಾಶೀಲತೆ ಹೆಚ್ಚುತ್ತದೆ. ಸದೃಢ ಆರೋಗ್ಯವನ್ನು ಹೊಂದಲು ನೆರವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಶಾಲೆಯಲ್ಲಿ ಮಾಡಿದ ಪಠ್ಯ ವಿಷಯಗಳನ್ನು ಅಂದೇ ಮನನ ಮಾಡಿಕೊಳ್ಳಬೇಕು. ಸಮಸ್ಯೆಗಳು, ಗೊಂದಲಗಳು ಇದ್ದರೆ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಎಷ್ಟು ಗಂಟೆಗಳ ಕಾಲ ಓದುವಿರಿ ಎನ್ನುವುದಕ್ಕಿಂತ ಎಷ್ಟು ಗಂಟೆಯಲ್ಲಿ ಎಷ್ಟು ವಿಷಯಗಳನ್ನು ಅರ್ಥೈಸಿಕೊಂಡಿರಿ ಎನ್ನುವುದು ಬಹಳ ಮುಖ್ಯ. ಚೆನ್ನಾಗಿ ನಿದ್ರೆ ಮಾಡುವುದರ ಜೊತೆಗೆ ಉತ್ತಮ ಆಹಾರ ಸೇವನೆಯೂ ಮುಖ್ಯವಾಗಿರುತ್ತದೆ ಎಂದರು.

ಜಂಕ್‌ಫುಡ್‌, ಫಾಸ್ಟ್‌ಫುಡ್‌ನಂತಹ ಆಹಾರಗಳಿಗೆ ಆಕರ್ಷಿತರಾಗದೆ, ಸೊಪ್ಪು, ತರಕಾರಿ, ಕಾಳುಗಳಿಂದ ತಯಾರಿಸಿದ ಆಹಾರವನ್ನು ಸೇವಿಸಿದರೆ ಹೆಚ್ಚು ಆರೋಗ್ಯಪೂರ್ಣವಾಗಿರುತ್ತದೆ. ರೋಗಗಳಿಂದಲೂ ದೂರವಿರಬಹುದು ಎಂದರಲ್ಲದೆ, ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆದಾಗ ಸಾಧನೆಯ ಹಾದಿ ಸುಲಭವಾಗುತ್ತದೆ. ಗುರಿ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಹಂತದಲ್ಲಿರುವ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಮೈಮರೆಯಬಾರದು. ಈ ಹಂತಗಳು ವಿದ್ಯಾರ್ಥಿಗಳ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಇಲ್ಲಿ ಜಾಗೃತಾವಸ್ಥೆಯಲ್ಲಿಲ್ಲದಿದ್ದರೆ ಶೈಕ್ಷಣಿಕ ಬದುಕು ಕಷ್ಟವಾಗುತ್ತದೆ. ಗೊಂದಲ, ಸಮಸ್ಯೆಗಳಿಗೆ ಅವಕಾಶ ನೀಡದೆ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ವ್ಯಕ್ತಿಗೌರವ ಹೆಚ್ಚಿಸಿಕೊಳ್ಳಬೇಕು ಎಂದರು.

ಕಾರ್ಮೆಲ್ ಶಾಲೆಯ ಸಿಸ್ಟರ್‌ ಗ್ಲಾಡಿಸ್‌, ಕುಮಾರ್‌ ಸೇರಿದಂತೆ ಇತರರಿದ್ದರು.