ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕೃತಿ, ಸಾಹಿತ್ಯ ಮುಖ್ಯ

| Published : Oct 28 2025, 12:03 AM IST

ಸಾರಾಂಶ

ನ್ನತ ನಾಗರೀಕತೆ ನಿರ್ಮಾಣದಲ್ಲಿ ನಮ್ಮ ಮಾತೃಭಾಷೆ ಹಾಗೂ ಸಂಸ್ಕೃತಿ ತಳಪಾಯವಾಗಿರುತ್ತದೆ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ನುಡಿದರು.

ಔರಾದ್: ನ್ನತ ನಾಗರೀಕತೆ ನಿರ್ಮಾಣದಲ್ಲಿ ನಮ್ಮ ಮಾತೃಭಾಷೆ ಹಾಗೂ ಸಂಸ್ಕೃತಿ ತಳಪಾಯವಾಗಿರುತ್ತದೆ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ನುಡಿದರು.

ಪಟ್ಟಣದ ಅಮರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ತಾಲೂಕು ಆಡಳಿತದಿಂದ ಆಯೋಜಿಸಿರುವ ಕರುನಾಡು ಸಾಂಸ್ಕೃತಿಕ ಉತ್ಸವ, ನಾಡು ನುಡಿ ಚಿಂತನೆ ಉಪನ್ಯಾಸ ಮಾಲಿಕೆಗೆ ಚಾಲನೆ ನೀಡಿ ಮಾತನಾಡಿದರು. ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕೃತಿ ಸಾಹಿತ್ಯ ಮುಖ್ಯ ಎಂದ ಅವರು, ಕನ್ನಡ ನಾಡು ನುಡಿಗೆ ಉತ್ತರ ಕರ್ನಾಟಕದ ಕೊಡುಗೆ ಮರೆಯುವಂತಿಲ್ಲ. ಕನ್ನಡದ ಶ್ರೀಮಂತಿಕೆಗೆ ಮಹತ್ವದ ಕಾಣಿಕೆ ಕೊಟ್ಟ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಹುಟ್ಟು ನಮ್ಮ ನೆಲದಲ್ಲಿಯೇ. ಭಾಷಾಪ್ರೇಮ, ಭಾಷಾಭಿಮಾನ ಮರೆತರೆ ದ್ವೀತಿಯ ದರ್ಜೆ ನಾಗರೀಕರಂತೆ ಬದುಕಬೇಕಾಗುತ್ತದೆ. ನಮ್ಮ ಗ್ರಾಮ, ನಮ್ಮ ಭಾಷೆಯ ಬಗ್ಗೆ ಅಭಿಮಾನವಿರಲಿ ಎಂದರು.

ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, ಕನ್ನಡವೆಂದರೆ ಒಂದು ಭಾಷೆಯಲ್ಲ ಅದು ಸಮಗ್ರ ಜೀವನ ಮೌಲ್ಯಗಳ ಸಂಗಮವಾಗಿದೆ. ಕನ್ನಡಪರ ಕಾಳಜಿ ಇಟ್ಟುಕೊಂಡು ಗಡಿಯಲ್ಲಿ ಕನ್ನಡದ ಬೆಳವಣಿಗೆಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ತಾಲೂಕು ಆಡಳಿತದ ಕಾರ್ಯ ಶ್ಲಾಘನೀಯ ಎಂದರು.

ಅಮರೇಶ್ವರ ಪದವಿ ಕಾಲೇಜು ಪ್ರಾಚಾರ್ಯೆ ಡಾ. ಪ್ರೇಮಾ ಹೂಗಾರ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಆರ್.ಪಿ ಮಠ ಮಾತನಾಡಿದರು.

ಪತ್ರಕರ್ತ ಅಮರಸ್ವಾಮಿ ಸ್ಥಾವರಮಠ, ಕಸಾಪ ಸಂಚಾಲಕ ಅಶೋಕ ಶೆಂಬೆಳ್ಳೆ, ಉತ್ತಮ ಜಾಧವ, ಶಿವರಾಮ ರಾಠೋಡ, ಉತ್ತಮ ದಂಡೆ, ಸಿಕಂದರ್ ಚವ್ಹಾಣ, ಶೇಖ್ ಮುಜೀಬ್, ಪ್ರೀಯಾ ಮಿಲಿಂದ್ ಸೇರಿದಂತೆ ಇನ್ನಿತರರಿದ್ದರು.

ಮಕ್ಕಳೊಂದಿಗೆ ತಹಸೀಲ್ದಾರ್ ಸಂವಾದ

ಸಮಾರಂಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ತಹಸೀಲ್ದಾರ್ ಮಹೇಶ ಪಾಟೀಲ್, ಹಲವು ಕನ್ನಡದ ಪ್ರಶ್ನೆಗಳನ್ನು ಕೇಳಿ ಮಕ್ಕಳಲ್ಲಿನ ಕನ್ನಡ ಜ್ಞಾನದ ಕುರಿತು ಪರಿಶೀಲಿಸಿದರು. ಕನ್ನಡ ನಾಡು ನುಡಿ ವಿಚಾರಗಳು, ಕವಿಗಳು, ಲೇಖಕರು, ವಚನಕಾರರು, ಕೀರ್ತನೆಕಾರರು, ಕರ್ನಾಟಕ ಏಕೀಕರಣ, ರಾಜ್ಯೋತ್ಸವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಕನ್ನಡದ ಪ್ರಾಧ್ಯಾಪಕರಂತೆ ಕಂಡರು.