ಗುರುಪರಂಪರೆಯ ಕಾರಣದಿಂದ ನಮ್ಮ ದೇಶದಲ್ಲಿ ಸಂಸ್ಕೃತಿ- ಪರಂಪರೆಯು ಶಾಶ್ವತವಾಗಿ ಉಳಿದಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ನುಡಿದರು.
ರಾಣಿಬೆನ್ನೂರು: ಗುರುಪರಂಪರೆಯ ಕಾರಣದಿಂದ ನಮ್ಮ ದೇಶದಲ್ಲಿ ಸಂಸ್ಕೃತಿ- ಪರಂಪರೆಯು ಶಾಶ್ವತವಾಗಿ ಉಳಿದಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ನುಡಿದರು.ತಾಲೂಕಿನ ಮುದೇನೂರು ಗ್ರಾಮದ ಹಿರೇಮಠದ ಆವರಣದಲ್ಲಿ ನಡೆದ ಧರ್ಮ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಮುದೇನೂರು ಹಿರೇಮಠವು ಒಂದು ಪವಿತ್ರ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಶ್ರೀಶೈಲ ಪೀಠಕ್ಕೆ ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಉಜ್ಜಯನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಪಂಚಪೀಠಕ್ಕೆ ಇಬ್ಬರು ಜಗದ್ಗುರುಗಳನ್ನು ನೀಡಿದ ಕೀರ್ತಿ ತಾಲೂಕಿನ ಮುದೇನೂರು ಗ್ರಾಮದ ಹಿರೇಮಠಕ್ಕೆ ಸಲ್ಲುತ್ತದೆ. ಉಭಯ ಗುರುಗಳು ಪೀಠಾರೋಹಣ ಮಾಡಿ ನಾಡು ನುಡಿಗೆ ಅಸಾಮಾನ್ಯ ಕೊಡುಗೆ ನೀಡಿದ್ದಾರೆ ಎಂದರು. ವೀರಶೈವ ಧರ್ಮದಲ್ಲಿ ವೈದಿಕ ಪರಂಪರೆ ಪ್ರಮುಖವಾಗಿದೆ. ಹೀಗಾಗಿ ಮುದೇನೂರು ಹಿರೇಮಠವು ಭವಿಷ್ಯದಲ್ಲಿ ಒಳ್ಳೆಯ ಗುರುಕುಲವಾಗುವಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲ ಮಠಗಳಿಗೆ ಉತ್ತರಾಧಿಕಾರಿಗಳನ್ನು ಗುರುಗಳನ್ನು ತಯಾರು ಮಾಡುವ ಕೇಂದ್ರವಾಗಲಿದೆ. ಲಿಂ. ಮಲ್ಲಿಕಾರ್ಜುನ ಸ್ವಾಮೀಜಿ ಜಂಗಮ ಕಾಯಕ ಮಾಡಿ ಬದುಕಿದ್ದರು. ಅವರ ಕಾಯಕ ಸವಿನೆನಪು ಶಾಶ್ವತವಾಗಿ ಉಳಿಯಬೇಕಾದರೆ ಭಕ್ತ ಸಮೂಹ ಸಹಾಯ ಮಾಡಿ ಹಿರೇಮಠವನ್ನು ಅಭಿವೃದ್ಧಿಗೊಳಿಸಿದಾಗ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು. ಕಾಶೀ ಪೀಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಅನೇಕ ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ಸಿಕ್ಕಿದೆ. ಗುರುವಿನ ಸಾನ್ನಿಧ್ಯದಲ್ಲಿ ದೇಹವನ್ನು ದಂಡಿಸುವ ಮೂಲಕ ನಮ್ಮ ಪೂರ್ಣಾಂಗಗಳು ಶರಣಾಗತಿ ಹೊಂದಿದಾಗ ಗುರುವಿನ ಕೃಪಾಕಟಾಕ್ಷ ಒಲಿಯಲು ಸಾಧ್ಯವಾಗುತ್ತದೆ ಎಂದರು.ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಉಜ್ಜಯನಿ ಪೀಠದ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿದರು.ಸಿಂದಗಿ ಸಾರಂಗಮಠ ಮತ್ತು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆವರಗೊಳ್ಳ ಮಠದ ಓಂಕಾರ ಶಿವಾಚಾರ್ಯರು, ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯರು, ಹಿರೇಕುರುವತ್ತಿ ಶ್ರೀಗಳು, ಕೊಡಿಯಾಲ ಹೊಸಪೇಟೆ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.ಮಾಜಿ ಸಂಸದ ಮಂಜುನಾಥ ಕುನ್ನೂರ, ಎಸ್.ಎಸ್. ರಾಮಲಿಂಗಣ್ಣವನರ, ಸುನಂದಮ್ಮ ತಿಳುವಳ್ಳಿ, ಎಂ.ಎಂ.ಜೆ ಹರ್ಷವರ್ಧನ, ಆನಂದ ಗಡ್ಡದದೇವರಮಠ ಹಾಗೂ ಮುದೇನೂರ ಹಿರೇಮಠದ ಕುಟುಂಬದವರು ಸೇರಿದಂತೆ ದಾವಣಗೆರೆ, ಹರಿಹರ, ಹರಪನಹಳ್ಳಿ, ಕೊಟ್ಟೂರ, ಹೊನ್ನಾಳಿ, ಜಗಳೂರ, ಹಿರೇಕೆರೂರ, ಚಿತ್ರದುರ್ಗ, ವಿಜಯನಗರ, ಉಜ್ಜಯಿನಿ, ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಶಿವಮೊಗ್ಗ, ಹಾವೇರಿ, ಗದಗ ಜಿಲ್ಲೆಯ ಭಕ್ತರು, ಶಿಷ್ಯಂದಿರು, ಪಂಚಪೀಠದ ಅಭಿಮಾನಿಗಳು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.