ಹಿರಿಯರಿದ್ದ ಮನೆಯಲ್ಲಿ ಸಂಸ್ಕೃತಿ ನೆಲೆಸಿರುತ್ತದೆ: ನ್ಯಾ.ಅಣ್ಣಯ್ಯ

| Published : Aug 08 2024, 01:37 AM IST

ಹಿರಿಯರಿದ್ದ ಮನೆಯಲ್ಲಿ ಸಂಸ್ಕೃತಿ ನೆಲೆಸಿರುತ್ತದೆ: ನ್ಯಾ.ಅಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ಮನೆಯಲ್ಲಿ ಸಂಸ್ಕೃತಿ ಇರುತ್ತದೋ, ಯಾವ ಮನೆಯ ಅಂಗಳ ಸ್ವಚ್ಛವಾಗಿರುತ್ತದೋ ಅಂತಹ ಮನೆಯಲ್ಲಿ ಹಿರಿಯರಿದ್ದಾರೆ, ಆ ಮನೆಗಳಲ್ಲಿ ಹಿರಿಯ ನಾಗರೀಕರು, ಹೆತ್ತವರು ಉತ್ತಮ ಸಂಸ್ಕೃತಿ ಕಲಿಸಿದ್ದಾರೆಂದರ್ಥ ಎಂದು ಒಂದನೇ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಎಂ.ಎಚ್‌. ಅಣ್ಣಯ್ಯ ಹೇಳಿದ್ದಾರೆ.

- ಕೆಎಚ್‌ಬಿ ತುಂಗಭದ್ರಾ ಬಡಾವಣೆಯಲ್ಲಿ ಹಿರಿಯ ನಾಗರೀಕರ ಸಂಘ ಉದ್ಘಾಟನೆ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಯಾವ ಮನೆಯಲ್ಲಿ ಸಂಸ್ಕೃತಿ ಇರುತ್ತದೋ, ಯಾವ ಮನೆಯ ಅಂಗಳ ಸ್ವಚ್ಛವಾಗಿರುತ್ತದೋ ಅಂತಹ ಮನೆಯಲ್ಲಿ ಹಿರಿಯರಿದ್ದಾರೆ, ಆ ಮನೆಗಳಲ್ಲಿ ಹಿರಿಯ ನಾಗರೀಕರು, ಹೆತ್ತವರು ಉತ್ತಮ ಸಂಸ್ಕೃತಿ ಕಲಿಸಿದ್ದಾರೆಂದರ್ಥ ಎಂದು ಒಂದನೇ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಎಂ.ಎಚ್‌.ಅಣ್ಣಯ್ಯ ಹೇಳಿದರು.

ನಗರದ ಹೊರ ವಲಯದ ಕೆಎಚ್‌ಬಿ ತುಂಗಭದ್ರಾ ಬಡಾವಣೆಯಲ್ಲಿ ಹಿರಿಯ ನಾಗರೀಕರ ಸಂಘ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತುಂಗಭದ್ರಾ ಬಡಾವಣೆಯಲ್ಲಿ ಹಿರಿಯ ನಾಗರೀಕರು ಸೇರಿಕೊಂಡು, ಸಂಘವನ್ನು ಸ್ಥಾಪಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ಬಡಾವಣೆ ವಾತಾವರಣವೂ ಸುಭಿಕ್ಷೆಯಿಂದ ಕೂಡಿರುತ್ತದೆ. ಇಂಥದ್ದೊಂದು ಸಂಘ ಸ್ಥಾಪಿಸಿದ ಅಧ್ಯಕ್ಷರು, ಸದಸ್ಯರು, ಹಿರಿಯ ನಾಗರೀಕರಿಗೆ ಅಭಿನಂದಿಸುತ್ತೇವೆ ಎಂದು ತಿಳಿಸಿದರು.

ಸಂಘ ಸ್ಥಾಪನೆ ಮೂಲಕ ಸ್ಥಳೀಯ ಸಮಸ್ಯೆಗಳು, ಮೂಲಸೌಕರ್ಯಗಳ ಕುರಿತಾಗಿ ಧ್ವನಿಯೆತ್ತಲು ಸಹಕಾರಿಯಾಗಿದೆ. ಹಿರಿಯ ನಾಗರೀಕರು ಸಂಘದ ಮೂಲಕ ಬಡಾವಣೆಯ ಅಭಿವೃದ್ಧಿಗೆ, ಈ ಭಾಗದಲ್ಲಿ ಎಲ್ಲರಲ್ಲೂ ಪ್ರೀತಿ, ವಾತ್ಸಲ್ಯ, ಸ್ನೇಹಮಯ ವಾತಾವರಣ ನಿರ್ಮಾಣಕ್ಕೂ ಕಾರಣವಾಗಲಿದ್ದಾರೆ. ಸಂಘದ ಮೂಲಕ ಬಡಾವಣೆ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಅವರು ಹಾರೈಸಿದರು.

ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ ಮಾತನಾಡಿ, ಹಿರಿಯ ನಾಗರೀಕರು ಅದರಲ್ಲೂ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದವರು ಹೆಚ್ಚಾಗಿ ಹೋಂ ಸಿಕ್ ಆಗಿರುತ್ತಾರೆ. ಅಂತಹ ಹಿರಿಯ ಜೀವಗಳು ಕಾಲ ಕಳೆಯುವುದೇ ಕಷ್ಟವಾಗುತ್ತದೆ. ಇಂತಹ ಸಂಘದ ಮೂಲಕ ಹಿರಿಯ ನಾಗರೀಕರು ಸಮಾನ ಮನಸ್ಕರೊಂದಿಗೆ ಮಾತುಕತೆ, ಒಡನಾಟದಲ್ಲಿ ಲವಲವಿಕೆಯಿಂದ ಬೆರೆಯಲು ಸಾಧ್ಯವಾಗಲಿದೆ. ಸರ್ಕಾರಗಳು ಬಜೆಟ್‌ನಲ್ಲಿ ಹಿರಿಯ ನಾಗರೀಕರಿಗಾಗಿ ಏನಾದರೂ ಸೌಲಭ್ಯಗಳನ್ನು ಘೋಷಿಸಬೇಕಾಗಿದೆ ಎಂದರು.

ಸಂಘದ ಉಪಾಧ್ಯಕ್ಷ, ನಿವೃತ್ತ ಮುಖ್ಯಶಿಕ್ಷಕ ಎಂ.ಎಸ್. ರೇವಣಪ್ಪ, ಕಾರ್ಯದರ್ಶಿ ಕೆ.ಪಿ. ಮಲ್ಲಿಕಾರ್ಜುನ ರೆಡ್ಡಿ, ಸಹ ಕಾರ್ಯದರ್ಶಿ ಟಿ.ಸಿ.ಎಂ. ವೀರಯ್ಯ, ಗೌರವಾಧ್ಯಕ್ಷ ಡಾ. ಸಿ.ಎಂ. ಮಲ್ಲಿಕಾರ್ಜುನಾಚಾರ್‌, ಉಪಾಧ್ಯಕ್ಷ ಎ.ಡಿ.ಚನ್ನಪ್ಪ, ಡಾ.ತಿಪ್ಪೇಶ ನಾಯ್ಕ, ಎಚ್.ಎಂ. ಮೃತ್ಯುಂಜಯ, ಸಿ.ರಾಮದಾಸ, ಕೆ.ಭೈರಪ್ಪ, ಸಿ.ಎಂ. ವಾಸುದೇವಪ್ಪ, ಬಿ.ಆರ್. ಚಂದ್ರಪ್ಪ, ಜಯಾನಂದ, ಎಸ್.ಕೆ. ಸುಶೀಲ, ಎ.ಕೆ. ರಾಮಣ್ಣ, ಗಿರೀಶ ಬಾಬು, ಎಚ್.ಡಿ. ಕುಮಾರ ಹನುಮಂತಪ್ಪ, ಉಮಾಕಾಂತ, ನಿವೃತ್ತ ಮುಖ್ಯ ಶಿಕ್ಷಕ ಎನ್.ಎಂ. ಲಿಂಗೇಶ, ಸಂಗೀತ ಶಿಕ್ಷಕಿ ಎಸ್.ಉಮಾ, ಸ್ಥಳೀಯ ನಿವಾಸಿಗಳು ಇದ್ದರು.

- - -

ಬಾಕ್ಸ್‌ * ಮೂಲಸೌಕರ್ಯಕ್ಕೆ ಸಂಘದೊಂದಿಗೆ ಕೈ ಜೋಡಿಸಿ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ, ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಕೆ.ವಾಸುದೇವ ಮಾತನಾಡಿ, ತುಂಗಭದ್ರಾ ಬಡಾವಣೆಯನ್ನು ಕರ್ನಾಟಕ ಗೃಹ ಮಂಡಳಿ ನಿರ್ಮಿಸಿದ್ದು, ಇಲ್ಲಿ 170 ವಾಸದ ಮನೆ ನಿರ್ಮಾಣವಾಗಿದೆ. ಸುಮಾರು 500-600 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಪಾಲಿಕೆಗೆ ಮನವಿ ಮಾಡಲು ಸ್ಥಳೀಯ ನಿವಾಸಿಗಳು ಸಂಘದ ಜೊತೆಗೆ ಕೈ ಜೋಡಿಸಬೇಕು. ಸ್ಥಳೀಯ ನಿವಾಸಿಗಳು, ಹಿರಿಯ ನಾಗರೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘ ಸ್ಥಾಪಿಸಲಾಗಿದೆ ಎಂದರು.

- - - -5ಕೆಡಿವಿಜಿ9:

ದಾವಣಗೆರೆ ಕೆಎಚ್‌ಬಿ ತುಂಗಭದ್ರಾ ಬಡಾವಣೆಯಲ್ಲಿ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯ ಅವರು ಹಿರಿಯ ನಾಗರೀಕರ ಸಂಘವನ್ನು ಉದ್ಘಾಟಿಸಿದರು.