ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಮಾನವ ಜೀವನದಲ್ಲಿ ಧೈರ್ಯ ಮತ್ತು ಚಲನಶೀಲತೆ ಮುಖ್ಯ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಸಂಸ್ಕೃತಿ ಮುಖ್ಯ. ಆಧುನಿಕತೆ ಮತ್ತು ವೈಚಾರಿಕತೆಯಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದೆಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನ ಆಶ್ರಯದಲ್ಲಿ ಜನ ಜಾಗೃತಿ ಧರ್ಮ ಸಮಾರಂಭದ 3ನೇ ದಿನದ ಸಾನ್ನಿಧ್ಯವಹಿಸಿ ಶನಿವಾರ ಆಶೀರ್ವಚನ ನೀಡಿದರು.ಜಗತ್ತು ಮತ್ತು ಜನ ಎಷ್ಟೇ ಬದಲಾದರೂ ಮಾನವ ಸಂಬಂಧಗಳು ಸಡಿಲಗೊಳ್ಳಬಾರದು. ಬಾಂಧವ್ಯ ಸಂಬಂಧಗಳನ್ನು ಮರೆತರೆ ಮನುಷ್ಯನಿಗೂ ಯಂತ್ರಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ಆದರೆ ವ್ಯಕ್ತಿತ್ವ ಕೊಳಕಾಗಿದ್ದರೆ ತೊಳೆಯುವುದು ಕಷ್ಟ. ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಜೀವನ ಉಜ್ವಲ ಭವಿಷ್ಯಕ್ಕೆ ಧರ್ಮಾಚಾರ್ಯರ ಮಾರ್ಗದರ್ಶನ ಮುಖ್ಯವಾಗಿದೆ. ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾದುದು ಅವಶ್ಯಕ. ಯುವಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ. ಯುವ ಜನಾಂಗ ತಾತ್ವಿಕ ಚಿಂತನೆಗಳ ಮೂಲಕ ಸುಖ ಶಾಂತಿ ಪಡೆಯಬೇಕೆಂದು ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.
ಕೇಂದ್ರದ ಜಲಶಕ್ತಿ ಹಾಗೂ ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಅಶಾಂತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಆಧ್ಯಾತ್ಮದ ಚಿಂತನ ಮುಖ್ಯ. ಈ ನಾಡಿನ ಧರ್ಮ ಪೀಠಗಳು ಉತ್ಕೃಷ್ಟ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಬಹು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರಂಭಾಪುರಿ ಪೀಠ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿಯೆಂದು ನಿರೂಪಿಸಿದೆ. ಇಂಥ ಅಮೂಲ್ಯ ಸಂದೇಶ ಸಾರಿದ ರಂಭಾಪುರಿ ಪೀಠದ ಘೋಷಣೆ ಸಮಾಜ ಮರೆಯುವಂತಿಲ್ಲ ಎಂದರು.ಬಳ್ಳಾರಿಯ ವೀರಭದ್ರಯ್ಯನವರು ವೀರಶೈವ ಧರ್ಮದ ಪ್ರಾಚೀನತ್ವ ಕುರಿತು ಉಪನ್ಯಾಸ ನೀಡಿದರು. ಶಿವಗಂಗೆ ಹೊನ್ನಮ್ಮ ಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪದೇಶ ನೀಡಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಮುಖಂಡರಾದ ಎನ್.ನಂಜುಂಡೇಶ್, ಎಸ್.ಜಿ.ಚಂದ್ರಮೌಳಿ, ಸಿದ್ಧಗಂಗಾ ರುದ್ರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕೆ.ಮಲ್ಲಿಕಾರ್ಜುನಯ್ಯ, ಎನ್.ಬಿ.ಪ್ರದೀಪಕುಮಾರ್, ಅತ್ತಿ ರೇಣುಕಾನಂದ, ಎ.ಆರ್.ದಶರಥ, ಎಸ್.ಎಸ್.ಆರಾಧ್ಯರು, ಡಾ.ರಾಜೇಂದ್ರ ಮೂಗಿ ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು.ತೆವಡೇಹಳ್ಳಿ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು, ಅಂಬಲದೇವರಹಳ್ಳಿ ಮಠದ ಉಜ್ಜನೀಶ್ವರ ಶಿವಾಚಾರ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಿ.ಆರ್.ಸತೀಶ್ ಸ್ವಾಗತಿಸಿದರು. ಟಿ.ಎಸ್.ಕರುಣಾರಾಧ್ಯರು ನಿರೂಪಣೆ ಮಾಡಿದರು. ಧನುರ್ಮಾಸದ ಅಂಗವಾಗಿ ಪ್ರಾತ:ಕಾಲ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.