ಸಾರಾಂಶ
ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣ ನೀಡಿದರೆ ಸಾಲದು
ಧಾರವಾಡ: ಭಾರತೀಯ ಸಂಸ್ಕೃತಿ ಇನ್ನೊಬ್ಬರಿಗೆ ಅನುಕರಣೀಯ ಸಂಸ್ಕೃತಿಯಾಗಿದೆ. ಆ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ ಎಂದು ಇಂಚಲದ ಶ್ರೀಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.
ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ 2024-25ನೇ ಸಾಲಿನ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳ ಸಂಕಲ್ಪೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಆಧುನಿಕ ಯುಗದಲ್ಲಿ ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿದೆ. ಸಂಸ್ಕಾರಯುತ ಶಿಕ್ಷಣ ಮರೆಯಾಗುತ್ತಿದೆ. ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣ ನೀಡಿದರೆ ಸಾಲದು. ಶಿಕ್ಷಣದ ಜತೆಗೆ ವಿಧೇಯತೆ, ದೇಶಪ್ರೇಮ, ತಾಳ್ಮೆ, ಸಹನೆ, ಹಿರಿಯರಲ್ಲಿ ಗೌರವ ಭಾವನೆ, ತನ್ನ ಕಾಲ ಮೇಲೆ ತಾನು ನಿಲ್ಲುವ ಮನೋಭೂಮಿಕೆ ಇಂತಹ ಸಂಸ್ಕಾರ ಕಲಿಸಿದರೆ ಮಾತ್ರ ಮಗು ಸತ್ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದರು.ರಾಷ್ಟ್ರೋತ್ಥಾನ ಪ್ರಾಚಾರ್ಯರಾದ ಡಾ.ಅನಿತಾ ರೈ, ಉಪ ಪ್ರಾಚಾರ್ಯ ಶ್ರೀಕೃಷ್ಣ ಜೋಶಿ, ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಮಾತನಾಡಿದರು.
ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ, ಗುರುರಾಜ ಅಗಡಿ ಇದ್ದರು. ವೇದಘೋಷ, ಭಗವದ್ಗೀತೆ ಪಠಣ, ಸಂಕಲ್ಪ ಬೋಧನೆ, ಮಾತಾ-ಪಿತೃ ಪಾದಪೂಜೆ ನಡೆದವು. ದೀಪಾ ಕುಲಕರ್ಣಿ ಸ್ವಾಗತಿಸಿದರು. ಶಶಿಕಾಂತ ನಾಯ್ಕ ವಂದಿಸಿದರು. ರಾಮಚಂದ್ರ ಭಟ್ಟ ನಿರೂಪಿಸಿದರು.