ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ: ಶಾಸಕ ಆರ್‌.ಬಸನಗೌಡ

| Published : Dec 22 2023, 01:30 AM IST

ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ: ಶಾಸಕ ಆರ್‌.ಬಸನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕಾನೂನು ಬಾಹಿರವಾಗಿ ಚಟುವಟಿಕೆ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮಸ್ಕಿ ತಹಸೀಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರ ತಾಕೀತು.

ಕನ್ನಡಪ್ರಭ ವಾರ್ತೆ ಮಸ್ಕಿ

ಕ್ಷೇತ್ರದಲ್ಲಿ ಅಕ್ರಮ, ಕಾನೂನು ಬಾಹಿರವಾಗಿ ಚಟುವಟಿಕೆ ಕಂಡು ಬಂದರೆ ಯಾರ ಒತ್ತಡಕ್ಕೆ ಮಣಿಯದೇ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೆ ನೇರ ಹೊಣೆಯನ್ನಾಗಿ ಮಾಡಲಾಗುವುದು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗದೆ ಯಾರ ಒತ್ತಡಕ್ಕೂ ಹೆದರದೆ ಅಕ್ರಮ ಮರ ಮರಳು ಸಾಗಾಣಿ ಸೇರಿದಂತೆ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ. ಇದಕ್ಕೆ ನಮ್ಮಿಂದ ಯಾವುದೇ ರೀತಿಯ ಒತ್ತಡ ಬರುವುದಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳು ಅಕ್ರಮ ಚಟುವಟಿಕೆಗಳಿಗೆ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಸಕರು ಖಡಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಭೋವಿ ಜನಾಂಗದ ಜಾತಿ ಪ್ರಮಾಣ ಪತ್ರವನ್ನು ಬೇರೆಯವರು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಜಾತಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಅಂತಹ ಯಾವುದೇ ಜಾತಿ ಪ್ರಮಾಣ ಪತ್ರಗಳನ್ನು ನೀಡಬಾರದು ಎಂದು ರವಿ ಚಿಗರಿ ಮನವಿ ಮಾಡಿದರು.

ತಹಸೀಲ್ದಾರ್ ಅರಮನೆ ಸುಧಾ ಮಾತನಾಡಿ, ನಾವೂ ಬಂದ ನಂತರ ಅಂತಹ ಯಾವುದೇ ಪ್ರಮಾಣ ಪಾತ್ರಗಳನ್ನು ಕೊಟ್ಟಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿರಸ್ತೇದಾರ ಅಖ್ತರ್ ಅಲಿ, ಅರುಣ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಕೋವಿಡ್ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಿ: ತಾಲೂಕಿನಲ್ಲಿ ಕೋವಿಡ್ ತಡೆಗಟ್ಟಲು ಅಧಿಕಾರಿಗಳು ಪ್ರತಿಯೊಂದು ಗ್ರಾಮದಲ್ಲಿ ಜನರಿಗೆ ಜಾಗೃತಿ ಮೂಡಿಸಿ ಸರ್ಕಾರ ಸೂಚಿಸುವ ಮಾನದಂಡಗಳನ್ನು ಪಾಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಬೇಕು ಎಂದು ಶಾಸಕ ಆರ್.ಬಸನಗೌಡ ಅಧಿಕಾರಿಗಳಿಗೆ ಸೂಚಿಸಿದರು.

ವೃದ್ಧರಿಗೆ, ಮಕ್ಕಳಿಗೆ ಮೊದಲ ಆದ್ಯತೆ ನೀಡಿ: ಸಭೆಗೆ ಆಗಮಿಸಿದ್ದ ಶಾಸಕ ಆರ್ ಬಸನಗೌಡ ತುರ್ವಿಹಾಳ ಕಚೇರಿಯಲ್ಲಿ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಆಧಾರ್ ಕೇಂದ್ರದಲ್ಲಿ ತೆರಳಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಆಧಾರ್ ಕಾರ್ಡ್‌ಗಾಗಿ ಸಾಲಿನಲ್ಲಿ ಮಕ್ಕಳು ನಿಂತಿದ್ದನ್ನ ಕಂಡು, ಮೊದಲು ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಕೊಡಿ ಎಂದು ಸಿಬ್ಬಂದಿಗೆ ಸೂಚಿಸಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.