ಅಕ್ರಮ ಮದ್ಯ ಸಾಗಾಟ, ಹಂಚಿಕೆಗೆ ಕಡಿವಾಣ ಹಾಕಿ: ಡಿಸಿ

| Published : Mar 24 2024, 01:38 AM IST

ಸಾರಾಂಶ

ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟಕ್ಕೆ ಕಡಿವಾಣ ಹಾಕಬೇಕು. ಕಳ್ಳಬಟ್ಟಿ ಮದ್ಯ ಮಾರಾಟಕ್ಕೂ ಬ್ರೆಕ್ ಹಾಕಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭೆ ಚುನಾವಣೆಯ ಎಂ.ಸಿ.ಸಿ. ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟಕ್ಕೆ ಕಡಿವಾಣ ಹಾಕಬೇಕು. ಕಳ್ಳಬಟ್ಟಿ ಮದ್ಯ ಮಾರಾಟಕ್ಕೂ ಬ್ರೆಕ್ ಹಾಕಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅಬಕಾರಿ ಇಲಾಖೆ ಹಾಗೂ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಕ್ರಮ ಮದ್ಯ, ಲಿಕ್ಕರ್ ವಶಕ್ಕೆ ಪಡೆದು ಎಫ್.ಐ.ಆರ್. ದಾಖಲಿಸಬೇಕು. ಅಕ್ರಮವಾಗಿ ಯಾರಾದರೂ ಶೇಖರಣೆ ಮಾಡಿಟ್ಟುಕೊಂಡಿರುವ ಬಗ್ಗೆ ಪಕ್ಕಾ ಮಾಹಿತಿ ದೊರೆತಲ್ಲಿ ರೇಡ್ ಮಾಡಬೇಕು. ಇಲಾಖೆಯ ಗುಪ್ತಚರ ವಿಭಾಗ ಚುರುಕುಗೊಳಿಸಬೇಕು. ಪ್ರತಿ ದಿನ ಅಕ್ರಮ ಮದ್ಯ ಸೀಜ್ ವರದಿ ನೀಡಬೇಕೆಂದರು.

ಸಂಶಯಾಸ್ಪದ ಹಣ ವರ್ಗಾವಣೆ, ಮಾಹಿತಿ ಕೊಡಿ: ಅಕ್ರಮ ಹಣ ವರ್ಗಾವಣೆ ತಡೆಗಟ್ಟುವ ನಿಟ್ಟಿನಲ್ಲಿ ಒಬ್ಬ ವ್ಯಕ್ತಿ ಹಲವಾರು ಜನರಿಗೆ ಒಂದೇ ಸಮಯದಲ್ಲಿ 500 ರು. ಮತ್ತು ಮೇಲ್ಪಟ್ಟ ಯೂ.ಪಿ.ಐ. ವಹಿವಾಟು ಮಾಡಿದಲ್ಲಿ, ಒಂದು ಲಕ್ಷ ರೂ. ಮೇಲ್ಪಟ್ಟ ವಹಿವಾಟು ಸಂಶಯಾಸ್ಪದ ರೂಪದಲ್ಲಿ ಕಂಡುಬಂದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ಮತ್ತು ಎಂ.ಸಿ.ಸಿ. ನೋಡಲ್ ಅಧಿಕಾರಿಗಳ ಗಮನಕ್ಕೆ ತರಬೇಕು. ₹10 ಲಕ್ಷಕ್ಕೂ ಮೇಲ್ಪಟ್ಟ ವಹಿವಾಟಿನ ಪ್ರತಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕೆಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಬ್ಯಾಂಕರ್ಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಬ್ಯಾಂಕರ್ಸ್‌ಗಳೊಂದಿಗೆ ಸಮನ್ವಯ ಸಾಧಿಸಿ ಚುನಾವಣೆ ಮಾದರಿ ನೀತಿ ಸಂಹಿತೆಯಲ್ಲಿ ಬ್ಯಾಂಕರ್ಸ್ ಗಳು ನಿರ್ವಹಿಸಬಹುದಾದ ಜವಾಬ್ದಾರಿಯನ್ನು ಎಲ್ಲಿಯೂ ಲೋಪವಾಗದಂತೆ ನಿರ್ವಹಿಸುವಂತೆ ಸೂಚನೆ ನೀಡಿದರು. ಇದಲ್ಲದೆ ಆದಾಯ ತೆರಿಗೆ ಇಲಾಖೆಯೊಂದಿಗೆ ಸತತ ಸಂಪರ್ಕ ಹೊಂದಬೇಕೆಂದರು.

ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನಕುಮಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಹಂಚಿಕೆಗೆ ಕಡಿವಾಣ ಹಾಕಬೇಕು. ಅಬಕಾರಿ ಪೊಲೀಸ್‌ ತಂಡಗಳು ಸ್ಥಳೀಯ ಸಿವಿಲ್ ಪೊಲೀಸ್ ಜೊತೆಗೆ ಸಮನ್ವಯತೆ ಸಾಧಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸಿ.ಇ.ಓ ಮತ್ತು ಎಂ.ಸಿ.ಸಿ ನೋಡಲ್ ಅಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ ಕೆಲವು ಬ್ಯಾಂಕ್‌ಗಳು ಕಚೇರಿ ಹೊಂದಿರದೆ ಎ.ಟಿ.ಎಂ., ಫ್ರಾಂಚೈಸಿ ಮೂಲಕ ಆರ್ಥಿಕ ವಹಿವಾಟು ನಡೆಸುತ್ತಿದ್ದು, ಇಂತಹವರ ಮೇಲೂ ನಿಗಾ ವಹಿಸಬೇಕು. ಪ್ರತಿ ದಿನ 1 ಲಕ್ಷ ರು., 10 ಲಕ್ಷ ರೂ. ಮೇಲ್ಪಟ್ಟ ವಹಿವಾಟಿನ ಕೇವಲ ಮಾಹಿತಿ ಪಟ್ಟಿ ನೀಡದೆ ಅಕ್ರಮ ಹಣದ ಮೂಲ ಪತ್ತೆ ಸಹ ಹಚ್ಚಬೇಕು ಎಂದರು.

ಅಬಕಾರಿ ಉಪ ಆಯುಕ್ತೆ ಆಫ್ರೀನ್ ಮಾತನಾಡಿ ಜಿಲ್ಲೆಯ ಖಜೂರಿ, ರಿಬ್ಬನಪಲ್ಲಿ, ಮಿರಿಯಾಣ, ಕುಂಚಾವರಂ ಅಂತರ ರಾಜ್ಯ ಗಡಿಯಲ್ಲಿ ಅಬಕಾರಿ ಚೆಕ್‌ಪೋಸ್ಟ್‌ ಸ್ಥಾಪಿಸಿ ಪಿ.ಐ. ಮತ್ತು ಸಿಬ್ಬಂದಿಗಳನ್ನು ಗಳನ್ನು ನೇಮಿಸಿ ಗಸ್ತು ಚುರುಕುಗೊಳಿಸಲಾಗಿದೆ ಎಂದರು.

ಸಭೆಯಲ್ಲಿ ಎಸ್.ಪಿ. ಅಕ್ಷಯ್ ಹಾಕೈ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್ ಸೇರಿದಂತೆ ಅಬಕಾರಿ ಮತ್ತು ಬ್ಯಾಂಕರ್ಸ್ ಅಧಿಕಾರಿಗಳು ಇದ್ದರು.