ಜಿಲ್ಲೆಯಲ್ಲಿ ಕಳೆದ ಜೂನ್‌ನಿಂದ ಈವರೆಗೆ ಒಂದು ತಾಯಿ ಮರಣ, ಎರಡು ಶಿಶು ಮರಣ ಹಾಗೂ ಐದು ವರ್ಷದೊಳಗಿನ ಮಕ್ಕಳಲ್ಲಿ ಮೂರು ಮರಣ ಪ್ರಕರಣಗಳು ವರದಿ

ಹೊಸಪೇಟೆ: ರೋಗಿಗಳ ಆರೋಗ್ಯ ಸ್ಥಿತಿ ಕಾಲಕಾಲಕ್ಕೆ ಪರಿಶೀಲಿಸಿ, ತುರ್ತು ಪರಿಸ್ಥಿತಿ ಮೊದಲೇ ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಜೂನ್‌ನಿಂದ ಈವರೆಗೆ ಒಂದು ತಾಯಿ ಮರಣ, ಎರಡು ಶಿಶು ಮರಣ ಹಾಗೂ ಐದು ವರ್ಷದೊಳಗಿನ ಮಕ್ಕಳಲ್ಲಿ ಮೂರು ಮರಣ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಪ್ರಕರಣ ಗಂಭೀರವಾಗಿ ಪರಿಶೀಲಿಸಿ, ಸಾವಿಗೆ ಕಾರಣವಾದ ವೈದ್ಯಕೀಯ ಅಂಶ ಗುರುತಿಸಬೇಕು ಎಂದರು.

ರೋಗಿಗಳ ಸ್ಥಿತಿ ಸಮರ್ಪಕವಾಗಿ ಗಮನಿಸದೆ ಅಗತ್ಯ ಸಮಯದಲ್ಲಿ ಸೂಕ್ತ ಚಿಕಿತ್ಸಾ ಕ್ರಮ ಕೈಗೊಳ್ಳದಿರುವ ಕುರಿತು ದೂರುಗಳು ಕೇಳಿಬರುತ್ತಿವೆ. ಪರಿಣಿತ ವೈದ್ಯರ ಸೇವೆ ಲಭ್ಯವಿದ್ದರೂ ತುರ್ತು ಸಂದರ್ಭದಲ್ಲಿ ಸಮರ್ಪಕವಾಗಿ ಸ್ಪಂದಿಸದಿರುವುದು ಗಂಭೀರ ವಿಚಾರವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಾವಿಗೆ ನಿಖರ ಕಾರಣವೇನು? ಚಿಕಿತ್ಸೆ ನೀಡಿದ ಸಂದರ್ಭದಲ್ಲಿ ಏನೆಲ್ಲ ಕ್ರಮ ಕೈಗೊಳ್ಳಲಾಯಿತು? ರೋಗಿಯ ಸ್ಥಿತಿ ಯಾವ ಹಂತದಲ್ಲಿ ಗಂಭೀರವಾಯಿತು? ಮೇಲ್ದರ್ಜೆಯ ಆಸ್ಪತ್ರೆಗೆ ಏಕೆ ಕಳುಹಿಸಲಾಯಿತು? ಎಂಬುದರ ಕುರಿತು ಸಂಪೂರ್ಣ ಮಾಹಿತಿ ದಾಖಲಾತಿಗಳೊಂದಿಗೆ ನೀಡುವಂತೆ ತಾಕೀತು ಮಾಡಿದರು.

ಒಂದು ಜೀವ ಕಳೆದುಹೋದ ಬಳಿಕ ಕಾರಣ ಹುಡುಕುವುದಕ್ಕಿಂತ, ಜೀವ ಉಳಿಸುವ ಮುನ್ನೆಚ್ಚರಿಕೆಯೇ ಮುಖ್ಯ. ಪ್ರತಿಯೊಬ್ಬ ರೋಗಿಯ ಸ್ಥಿತಿ ಗಂಭೀರವಾಗಿ ಪರಿಗಣಿಸಿ ತುರ್ತು ಸಂದರ್ಭದಲ್ಲಿ ಒಂದು ಕ್ಷಣವೂ ವಿಳಂಬವಾಗದಂತೆ ಕಾರ್ಯ ನಿರ್ವಹಿಸಬೇಕು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಿಇಒ ಸೂಚಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರೊಂದಿಗೆ ಸಿಬ್ಬಂದಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಸೌಜನ್ಯಯುತವಾಗಿ ವರ್ತಿಸುತ್ತಿಲ್ಲ ಎಂಬ ಗಂಭೀರ ಆರೋಪಗಳಿಗೂ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳು, ರೋಗಿಗಳ ಸ್ಥಿತಿ ಗುರುತಿಸುವಿಕೆ, ತ್ವರಿತ ರೆಫರಲ್ ವ್ಯವಸ್ಥೆ ಹಾಗೂ ಚಿಕಿತ್ಸಾ ಪ್ರೋಟೋಕಾಲ್ ಕುರಿತು ತರಬೇತಿ ನೀಡುವಂತೆ ಡಿಎಚ್‌ಒಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖನಾಯ್ಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.