18 ವರ್ಷದೊಳಗಿನ ಮಕ್ಕಳಿಗೆ ಬಾಲ್ಯವಿವಾಹ ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಪೋಷಕರು ಮಕ್ಕಳಿಗೆ ಮದುವೆ ಮಾಡಿಸುತ್ತಿದ್ದಾರೆ. ಗರ್ಭಿಣಿಯಾಗುತ್ತಿದ್ದಂತೆ ಆಧಾರ್ ಕಾರ್ಡ್‌ನಲ್ಲಿ ವಯಸ್ಸು ಬದಲಾಯಿಸಿ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ.

ಧಾರವಾಡ:

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ಗರ್ಭಿಣಿಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಜಾಗೃತಿ ಕಾರ್ಯಕ್ರಮಗಳ ಕುರಿತು ಸಭೆ ಜರುಗಿಸಿದ ಅವರು, 18 ವರ್ಷದೊಳಗಿನ ಮಕ್ಕಳಿಗೆ ಬಾಲ್ಯವಿವಾಹ ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಪೋಷಕರು ಮಕ್ಕಳಿಗೆ ಮದುವೆ ಮಾಡಿಸುತ್ತಿದ್ದಾರೆ. ಗರ್ಭಿಣಿಯಾಗುತ್ತಿದ್ದಂತೆ ಆಧಾರ್ ಕಾರ್ಡ್‌ನಲ್ಲಿ ವಯಸ್ಸು ಬದಲಾಯಿಸಿ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಅಂತಹ ಪ್ರಕರಣಗಳು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕಂಡುಬಂದಲ್ಲಿ ವೈದ್ಯರು ತಕ್ಷಣವೇ ಹತ್ತಿರದ ಪೊಲೀಸ್‌ ಸ್ಟೇಷನ್‍ಗೆ ಅಥವಾ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು ಎಂದರು.

ಮಕ್ಕಳು ಮದುವೆ ಹಾಗೂ ಗರ್ಭಿಣಿಯಾಗದಂತೆ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಶಾಲಾ-ಕಾಲೇಜುಗಳಲ್ಲಿ ಆಕರ್ಷಣೆಯಿಂದ ಜೀವನ ಹಾಳು ಮಾಡಿಕೊಳ್ಳದಂತೆ ಅವರಿಗೆ ಅರಿವು ಮೂಡಿಸಬೇಕು. ಈ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಿಸಬೇಕೆಂದರು.

ಜಿಲ್ಲೆಯಲ್ಲಿ ಪ್ರತಿ ದಿನವು ನಾಯಿ ಕಡಿತದ ಪ್ರಕರಣ ವರದಿಯಾಗುತ್ತಿದ್ದು ಕಳೆದ ಜನವರಿಯಿಂದ ಜೂನ್‌ ವರೆಗೆ ಒಟ್ಟು 6,714 ಪ್ರಕರಣ ದಾಖಲಾಗಿವೆ. ಎಲ್ಲ ಆಸ್ಪತೆಗಳಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದು ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಬೀದಿ ನಾಯಿಗಳ ಸಂತಾನಹರಣ ಕಾರ್ಯಕ್ರಮ ಕೈಗೊಳ್ಳಬೇಕು ಎಂದ ಅವರು, ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 30 VIAL ANTI SNAKE VENOM ಇರಿಸಿಕೊಳ್ಳಬೇಕು ಎಂದು ಸೂಚಿಸಿದರು.

ತಂಬಾಕು ನಿಷೇಧ:

ತಂಬಾಕು ನಿಯಂತ್ರಣ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದ ಜಿಲ್ಲಾಧಿಕಾರಿ, ಶಾಲೆ, ಕಾಲೇಜು, ಬಾರ್, ರೆಸ್ಟೋರೆಂಟ್, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಚೇರಿ, ರೈಲ್ವೆ ನಿಲ್ದಾಣ, ಬೇಕರಿ, ಟೀ ಸ್ಟಾಲ್, ಕೋರ್ಟ್‌ ಆವರಣ, ಸಾರ್ವಜನಿಕ ಗ್ರಂಥಾಲಯ, ಸುತ್ತಮುತ್ತಲೂ ಯಾವುದೇ ಅಂಗಡಿಗಳಲ್ಲಿ ತಂಬಾಕು, ಸೀಗರೆಟ್ ಮಾರಾಟ ಮಾಡದಂತೆ ಕ್ರಮಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಹೆಚ್ಚುವರಿ ದಂಡ ವಿಧಿಸಿ, ಎಚ್ಚರಿಕೆ ನೀಡಿ, ಆರೋಗ್ಯ ಇಲಾಖೆ ಅಧಿಕಾರಿಗಳು ತಂಬಾಕು ತಪಾಸಣೆಗೆ ಹೋದಾಗ ಪೊಲೀಸ್ ಇಲಾಖೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕು ಎಂದರು.

ಸಭೆಯಲ್ಲಿ ಡಿಎಚ್‌ಒ ಡಾ. ಪರುಶುರಾಮ್ ಎಫ್‌.ಕೆ., ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳು, ತಾಲೂಕು ಮಟ್ಟದ ವೈಧ್ಯಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಇದ್ದರು.