ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

| Published : Dec 24 2024, 12:49 AM IST

ಸಾರಾಂಶ

ಹೊಸದುರ್ಗ: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ. ಹಳ್ಳಿಯ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಅಬಕಾರಿ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹೊಸದುರ್ಗ: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ. ಹಳ್ಳಿಯ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಅಬಕಾರಿ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಬಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮದ್ಯದ ಹಣದಿಂದ ನಮ್ಮ ತಾಲೂಕಿನ ಅಭಿವೃದ್ಧಿ ಆಗಬೇಕಿಲ್ಲ. ಮದ್ಯದ ಆದಾಯದಿಂದ ಸರ್ಕಾರ ನಡೆಯಬೇಕಿಲ್ಲ. ನನಗೆ ನಮ್ಮ ತಾಲೂಕಿನ ಜನರ ನೆಮ್ಮದಿ ಮುಖ್ಯ. ಜನ ನನಗೆ ಮತ ಹಾಕಿರುವುದು ನೆಮ್ಮದಿಯ ಬದುಕು ನೀಡಲಿ ಎಂದು. ಕಳೆದ ಒಂದು ತಿಂಗಳಲ್ಲಿ ಮದ್ಯ ಸೇವನೆಯಿಂದ ಅಪಘಾತಕ್ಕೀಡಾಗಿ 5ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿಗೆ ಬಂದಿವೆ. ಇವರ ಸಾವಿಗೆ ಯಾರು ಹೊಣೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ದೂರುಗಳು ದಿನಾ ಪ್ರತಿ ನನಗೆ ಬರುತ್ತಿವೆ. ತಾಯಂದಿರು ತಮ್ಮ ಮಕ್ಕಳು ತಮ್ಮ ಕಣ್ಣಮುಂದೆ ಕುಡಿದು ಹಾಳಾಗುತ್ತಿರುವುದನ್ನು ನೋಡಲಾಗದೆ ನಮಗೆ ದೂರು ಹೇಳುತ್ತಿದ್ದಾರೆ. ನಿಮ್ಮದು ಏನೇ ವ್ಯವಹಾರವಿದ್ದರೂ ಇಲ್ಲಿಗೆ ನಿಲ್ಲಿಸಿ. ಮದ್ಯದ ಅಂಗಡಿಗಳಲ್ಲಿ ಮಾತ್ರ ಮಾರಾಟ ಮಾಡಲು ಮಾತ್ರ ಅವಕಾಶ ನೀಡಿ ಪುನಃ ಇಂತಹ ದೂರುಗಳು ಬಂದರೆ ಜನರಿಗೆ ನೀವೇ ಉತ್ತರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿದ್ದ ಮದ್ಯದ ಅಂಗಡಿ ಮಾಲೀಕರು ಮಾತನಾಡಿ, ಅಬಕಾರಿ ಇಲಾಖೆಯಿಂದ ನಮಗೆ ಟಾರ್ಗೆಟ್‌ ಕೊಡುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಹಳ್ಳಿಗಳಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ನಮಗೆ ಟಾರ್ಗೆಟ್‌ ನೀಡದಿದ್ದರೆ ಅಂಗಡಿಯಲ್ಲಿಯೇ ನಿಯಮಿತವಾಗಿ ಸ್ಟಾಕ್‌ ಪಡೆದು ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು .

ಇದಕ್ಕೆ ಶಾಸಕರು ಸಭೆಯಲ್ಲಿಯೇ ಅಬಕಾರಿ ಡೀಸಿಗೆ ದೂರವಾಣಿ ಕರೆ ಮಾಡಿ ಯಾವ ತಾಲೂಕುಗಳಿಗೆ ನೀವು ಏನು ಮಾಡುತ್ತೀರೋ ಗೊತ್ತಿಲ್ಲ ನಮ್ಮ ತಾಲೂಕಿಗೆ ಯಾವುದೇ ಟಾರ್ಗೆಟ್‌ ನೀಡಕೂಡದು. ಅಕ್ರಮ ಮದ್ಯ ಮಾರಾಟದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಒಂದು ವೇಳೆ ನೀವು ಟಾರ್ಗೆಟ್‌ ನೀಡಿ ಮದ್ಯ ಮಾರಾಟಗಾರರಿಗೆ ಒತ್ತಡ ಹಾಕಿದರೆ ತಾಲೂಕಿನಲ್ಲಿ ಆಗುವ ಅನಾವುತಗಳಿಗೆ ನಿಮ್ಮನ್ನೆ ಹೊಣೆಯನ್ನಾಗಿ ಮಾಡುತ್ತೇನೆ ಎಂದು ಎಚ್ಚರಿಸಿದರು.

ನಂತರ ಸುದ್ದಿಗಾಗರೊಂದಿಗೆ ಮಾತನಾಡಿದ ಶಾಸಕರು, ನಾನು ಶಾಸಕನಾಗಿ ಆಯ್ಕೆಯಾಗಿ 2 ವರ್ಷಗಳು ಕಳೆಯುತ್ತಿವೆ. ಕಂದಾಯ, ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ ತಾಲೂಕಿನಲ್ಲಿ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದೇನೆ. ಜನರು ನನ್ನ ಮೇಲೆ ನಂಬಿಕೆಯಿಟ್ಟು ಮತ ಹಾಕಿದ್ದಾರೆ. ಅಂತಹ ಮತದಾರರ ನಂಬಿಕೆಯನ್ನು ನಾನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.

ಸಭೆಯಲ್ಲಿ ತಹಸೀಲ್ದಾರ್‌ ತಿರುಪತಿ ಪಾಟೀಲ್‌, ತಾಪಂ ಇಒ ಸುನಿಲ್‌ಕುಮಾರ್‌, ಪಿಐಗಳಾದ ತಿಮ್ಮಣ್ಣ, ಮಧು, ಅಬಕಾರಿ ನೀರೀಕ್ಷರು, ಮದ್ಯದದಂಗಡಿ ಮಾಲೀಕರು, ಮದ್ಯ ಮಾರಾಟಗಾರರು ಹಾಜರಿದ್ದರು.