ತಾಳಿಕೋಟೆ: ಶ್ರೀ ಭಗೀರಥ ಸರ್ವಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಸರ್ವಧರ್ಮ ವಧು-ವರರ ಹಾಗೂ ಪಾಲಕರ ಪರಿಚಯ ಕಾರ್ಯಕ್ರಮದ ಸಮಾರಂಭವನ್ನು ಸಿದ್ದಯ್ಯ ಸ್ವಾಮಿ ಮರೋಳ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಇಂದಿನ ಆಧುನಿಕ ಜೀವನಶೈಲಿಯಲ್ಲಿ ವಿವಾಹ ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಮಧ್ಯಮ ಹಾಗೂ ಬಡ ಕುಟುಂಬಗಳು ಮದುವೆಯ ಖರ್ಚಿಗಾಗಿ ಸಾಲದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಳ, ಸಾತ್ವಿಕ ಹಾಗೂ ವೆಚ್ಚರಹಿತ ವಿವಾಹಗಳಿಗೆ ಉತ್ತೇಜನ ನೀಡುವುದರ ಜತೆಗೆ, ವಧು-ವರರಿಗೆ ಸೂಕ್ತ ಸಂಗಾತಿ ಪರಿಚಯಿಸುವ ಉದ್ದೇಶದಿಂದ ಶ್ರೀ ಭಗೀರಥ ಸರ್ವ ಧರ್ಮ ವಧು-ವರರ ಮಾಹಿತಿ ವಧು-ವರರ ಪಾಲಕರ ಪರಿಚಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ನಿವೃತ್ತ ಶಿಕ್ಷಕ ಸಿ.ಎಂ. ಹಿರೇಮಠ ಹೇಳಿದರು.ಪಟ್ಟಣದ ಬಾಲಾಜಿ ಸಭಾಭವನದಲ್ಲಿ ಭಗೀರಥ ಸರ್ವಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದ ವತಿಯಿಂದ ಭಾನುವಾರ ಹಮ್ಮಿಕೊಂಡ ಸರ್ವಧರ್ಮ ವಧು-ವರರ ಹಾಗೂ ಪಾಲಕರ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿವಿಧ ಸಮುದಾಯಗಳ ವಧು-ವರರ ಕುಟುಂಬಗಳಿಗೆ ಪರಸ್ಪರ ಪರಿಚಯವಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ವಧು-ವರರ ಬಯೋಡೇಟಾ, ಭಾವಚಿತ್ರ ಹಾಗೂ ಅಗತ್ಯ ಮಾಹಿತಿ ನೋಂದಾಯಿಸಿಕೊಂಡು, ಸಂಬಂಧಿಸಿದ ಕುಟುಂಬಗಳು ಪರಸ್ಪರ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಈ ವೇದಿಕೆ ಸಹಕಾರಿಯಾಗಲಿದೆ. ವರದಕ್ಷಿಣೆ ಪಿಡುಗಿನಿಂದಾಗಿ ಸಮಾಜದಲ್ಲಿ ಮದುವೆಗಳು ಕಷ್ಟ ಕಾರ್ಯಗಳಾಗಿವೆ. ಇದರಿಂದ ಬಡ ಮಧ್ಯಮವರ್ಗದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಮದುವೆಗಳು ಸರಳವಾಗಿ ನೆರವೇರುವಂತಾಗಲು ಇಂತಹ ವೇದಿಕೆಗಳು ತುಂಬಾ ಸಹಕಾರಿಯಾಗುತ್ತವೆ. ಇದರ ಜೊತೆಗೆ ಇಂತಹ ವೇದಿಕೆಗಳ ಮೂಲಕ ಸಾಮೂಹಿಕ ಹಾಗೂ ಅಂತರ್ಜಾತಿ ವಿವಾಹಗಳನ್ನೂ ಹಮ್ಮಿಕೊಳ್ಳಬೇಕು ಎಂದು ತಿಳಿಸಿ ದಿ.ಸುಭಾಸ ಯರಕ್ಯಾಳ ಅವರು ಕಳೆದ ೩೦ ವರ್ಷಗಳ ಹಿಂದೆ ಆರಂಭಿಸಿದ ಈ ಕೇಂದ್ರವನ್ನು ಅವರ ಚಿರಂಜೀವಿ ಸುನೀಲಕುಮಾರ ಯರಕ್ಯಾಳ ಅವರು ಬಹಳ ನಿಷ್ಠೆಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ ಅವರಿಗೆ ನಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.
ಮಲ್ಲಯ್ಯ ಹಿರೇಮಠ ಹಾಗೂ ಪಂಚಾಕ್ಷರಿ ಹಿರೇಮಠ ಮಾತನಾಡಿ, ಸಂಬಂಧಗಳನ್ನು ಜೋಡಿಸುವುದು ಪುಣ್ಯದ ಕಾರ್ಯವಾಗಿದೆ. ಇವತ್ತು ಪ್ರತಿಯೊಬ್ಬರೂ ನೌಕರಸ್ಥರನನ್ನೇ ಆಯ್ಕೆ ಮಾಡಲು ಬಯಸುತ್ತಾರೆ ಇದು ಸರಿಯಲ್ಲ. ಸಣ್ಣಪುಟ್ಟ ಕೆಲಸ ಮಾಡುವ ಸಂಸ್ಕಾರಯುತ ಯುವಕರನ್ನೂ ಆಯ್ಕೆ ಮಾಡಬೇಕು. ಇವತ್ತು ನಮಗೆಲ್ಲರಿಗೂ ಅನ್ನ ನೀಡುವ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಇದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಿದ್ದಯ್ಯ ಸ್ವಾಮಿ ಮರೋಳ ಮಾತನಾಡಿ, ಮದುವೆ ಎನ್ನುವುದು ಜೀವನದ ಮಹತ್ವದ ಘಟ್ಟವಾದರೂ, ಅದಕ್ಕಾಗಿ ಕುಟುಂಬಗಳು ತಮ್ಮ ಆರ್ಥಿಕ ಸಾಮರ್ಥ್ಯ ಮೀರಿ ಖರ್ಚು ಮಾಡುವುದು ಸರಿಯಲ್ಲ. ಅದ್ದೂರಿ ಮದುವೆ, ಅನಗತ್ಯ ಸಮಾರಂಭಗಳು ಹಾಗೂ ದುಬಾರಿ ವ್ಯವಸ್ಥೆಗಳಿಂದ ಸಾಲದ ಹೊರೆ ಹೆಚ್ಚಿಸಿಕೊಳ್ಳುವ ಬದಲು, ಸರಳವಾಗಿ ವಿವಾಹ ನೆರವೇರಿಸಿ ಉಳಿದ ಹಣವನ್ನು ಮಕ್ಕಳ ಭವಿಷ್ಯ, ಶಿಕ್ಷಣ, ಮನೆ ನಿರ್ಮಾಣ ಅಥವಾ ಉದ್ಯೋಗಕ್ಕೆ ಬಳಸಿಕೊಳ್ಳುವುದು ಸೂಕ್ತ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಖಾಸ್ಗತೇಶ್ವರ ಹಾಗೂ ವಿರಕ್ತಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗಣ್ಯರಾದ ಕಾಶಿರಾಯಗೌಡ ದೇಸಾಯಿ (ಶಳ್ಳಗಿ), ಶ್ರೀ ಭಗೀರಥ ವಧು-ವರರ ಕೇಂದ್ರದ ಗೌರವ ಅಧ್ಯಕ್ಷ ಬಸಯ್ಯ ಹಿರೇಮಠ, ಮಾದೇವಿ ಸುಭಾಸ ಯರಕ್ಯಾಳ, ಕಾರ್ಯದರ್ಶಿ ಸುನೀಲ ಯರಕ್ಯಾಳ, ಶರಣಗೌಡ ಪೊಲೀಸ್‌ಪಾಟೀಲ, ಭರತ್ ಅಗರವಾಲ, ವಿಕ್ರಮ ಅಗರವಾಲ, ಅಧ್ಯಕ್ಷ ಶಿವಾಜಿ ಯಡ್ರಾಮಿ, ಶರಣಗೌಡ ಪಾಟೀಲ(ಕರಿಭಾವಿ), ಖಜಾಂಚಿ ವೀರಭದ್ರ ಗಣಾಚಾರಿ, ಸಂಚಾಲಕ ಪೀರ್ ಮೊಹಮ್ಮದ್ ಖಾಜಿ, ಮೊಹಮ್ಮದ್ ಶಫೀಕ್ ಇನಾಮದಾರ, ಕಚೇರಿ ಸಹಾಯಕರಾದ ಪ್ರಕಾಶ ಬಬಲೇಶ್ವರ, ಪಾಂಡು ನನ್ನವರೆ, ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಧು ವರರ ಪಾಲಕರು ಉಪಸ್ಥಿತರಿದ್ದರು. ಸರ್ವ ಧರ್ಮದ ಕುಟುಂಬಗಳು ಒಂದೇ ವೇದಿಕೆಯಲ್ಲಿ ಸೇರಿ ವಧು-ವರರ ಮಾಹಿತಿ ವಿನಿಮಯ ಮಾಡಿಕೊಳ್ಳುವುದರಿಂದ ಸಾಮಾಜಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಇಂತಹ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲ ವರ್ಗದ ಜನರು ಸಹಕಾರ ನೀಡಬೇಕು.- ಸುನೀಲ್‌ಕುಮಾರ ಯರಕ್ಯಾಳ ವಧು-ವರರ ಮಾಹಿತಿ ಕೇಂದ್ರದ ಸಂಚಾಲಕ