ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತೊಗರಿ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿ ರೈತರಿಗೆ ‘ಮೋಹಕ ಬಲೆ ಬಳಕೆ’ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಕೊಪ್ಪಳ: ಮೋಹಕ ಬಲೆ ಬಳಕೆಯಿಂದ ತೊಗರಿ ಬೆಳೆಯಲ್ಲಿ ಕಂಡುಬರುವ ಕಾಯಿಕೊರಕ ಸೇರಿದಂತೆ ಕೀಟಬಾಧೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಬದರಿಪ್ರಸಾದ್ ಹೇಳಿದರು.
ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತೊಗರಿ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿ ರೈತರಿಗೆ ಆಯೋಜಿಸಿದ್ದ ‘ಮೋಹಕ ಬಲೆ ಬಳಕೆ’ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತೊಗರಿ ಬೆಳೆಯಲ್ಲಿ ಹೂವಾಡುವ ಹಂತದಲ್ಲಿ ಮೋಹಕ ಬಲೆ (ಫೆರಮೋನ್ ಟ್ರ್ಯಾಪ್) ಅಳವಡಿಸುವುದರಿಂದ ಬೆಳೆ ಹಾನಿ ಮಾಡುವ ಕಾಯಿಕೊರಕ ಕೀಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಮೋಹಕ ಬಲೆಯಲ್ಲಿರುವ ಲ್ಯೂರ್‌ನಲ್ಲಿ ಹೆಣ್ಣು ಪತಂಗವು ಗಂಡು ಪತಂಗವನ್ನು ಆಕರ್ಷಿಸಲು ಬಿಡುಗಡೆ ಮಾಡುವ ಫೆರಮೋನ್ ಅಂಶವಿರುತ್ತದೆ. ಇದರಿಂದ ಹೊಲದಲ್ಲಿರುವ ಗಂಡು ಪತಂಗಗಳು ಬಲೆಗೆ ಆಕರ್ಷಿತಗೊಂಡು ಬೀಳುತ್ತವೆ. ಬಲೆಯೊಳಗಿನ ಸಂಪರ್ಕ ಕೀಟನಾಶಕದ ಪ್ರಭಾವದಿಂದ ಅವು ನಾಶವಾಗುತ್ತವೆ. ಇದರಿಂದ ಗಂಡು ಮತ್ತು ಹೆಣ್ಣು ಪತಂಗಗಳ ಮಿಲನ ತಪ್ಪಿ, ಮುಂದಿನ ಸಂತಾನೋತ್ಪತ್ತಿ ಕುಂಠಿತಗೊಳ್ಳುತ್ತದೆ ಎಂದು ವಿವರಿಸಿದರು.
ಕೀಟಗಳ ಚಟುವಟಿಕೆ ಗಮನಿಸಲು, ಸಾಮೂಹಿಕ ಆಕರ್ಷಣೆಗೆ ಹಾಗೂ ಅವುಗಳ ಸಂತಾನ ನಿಯಂತ್ರಣಕ್ಕೆ ಮೋಹಕ ಬಲೆಗಳು ಸಹಕಾರಿಯಾಗುತ್ತವೆ ಎಂದರು.ಬಳಕೆಯ ವಿಧಾನ, ಎಚ್ಚರಿಕೆ: ಮೋಹಕ ಬಲೆಗಳನ್ನು ಬೆಳೆಯ ಮಟ್ಟಕ್ಕಿಂತ ಕನಿಷ್ಠ ಒಂದು ಅಡಿ ಎತ್ತರದಲ್ಲಿ ಕಟ್ಟಿಗೆಯ ಆಧಾರದೊಂದಿಗೆ ಅಳವಡಿಸಬೇಕು. ಫೆರಮೋನ್ ಲ್ಯೂರ್‌ಗಳನ್ನು ಕನಿಷ್ಠ 15 ದಿನಗಳಿಗೊಮ್ಮೆ ಬದಲಾಯಿಸಬೇಕು. ಯಾವುದೇ ಕಾರಣಕ್ಕೂ ಲ್ಯೂರ್‌ಗಳನ್ನು ಬರಿಗೈಯಿಂದ ಮುಟ್ಟಬಾರದು.
ಸತತ ಮೂರು ದಿನಗಳ ಕಾಲ ಪ್ರತಿದಿನ ಮೂರು ಪತಂಗಗಳು ಬಲೆಗೆ ಬಿದ್ದರೆ, ತಕ್ಷಣ ಸೂಕ್ತ ರಾಸಾಯನಿಕ ಕೀಟನಾಶಕ, ಜೈವಿಕ ಕೀಟನಾಶಕ ಅಥವಾ ಸಸ್ಯಜನ್ಯ ಕೀಟನಾಶಕಗಳನ್ನು ಸಿಂಪಡಿಸಿ ಕೀಟ ಹತೋಟಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ತಿಮ್ಮಣ್ಣ ಚೌಡಿ ಮಾತನಾಡಿ, ರೈತರು ಪರಿಸರಸ್ನೇಹಿ ಕೀಟ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೀಟನಾಶಕಗಳ ವೆಚ್ಚ ಕಡಿಮೆ ಮಾಡಿಕೊಂಡು ಲಾಭದಾಯಕ ಬೇಸಾಯ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾತ್ಯಕ್ಷಿಕೆಯಲ್ಲಿ ಪ್ರಗತಿಪರ ರೈತರಾದ ಗೈಬೂ ಸಾಬ್, ಹನಿಗಯ್ಯ ಸ್ವಾಮಿ, ರಾಮಣ್ಣ ಭಾಗವಹಿಸಿದ್ದರು.