ಸಾರಾಂಶ
ಕೊಪ್ಪ, ನಾಯಕತ್ವ ಎನ್ನುವುದು ತನ್ನೊಳಗೆ ಅಡಗಿರುವ ಶಕ್ತಿಯಾಗಿದೆ ಎಂದು ಬೆಂಗಳೂರು ಬಿಜಿಎಸ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಆರತಿ ಚೌಧರಿ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 2 ದಿನಗಳ ಕಾಲ ಆಯೋಜಿಸಿದ್ದ ರಾಜ್ಯ ಮಟ್ಟದ ನಾನೂ ನಾಯಕಿ ಮಹಿಳಾ ನಾಯಕತ್ವ ತರಬೇತಿ
ಕನ್ನಡಪ್ರಭ ವಾರ್ತೆ, ಕೊಪ್ಪನಾಯಕತ್ವ ಎನ್ನುವುದು ತನ್ನೊಳಗೆ ಅಡಗಿರುವ ಶಕ್ತಿಯಾಗಿದೆ ಎಂದು ಬೆಂಗಳೂರು ಬಿಜಿಎಸ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಆರತಿ ಚೌಧರಿ ಹೇಳಿದರು. ಕುಪ್ಪಳ್ಳಿ ಹೇಮಾಂಗಣದಲ್ಲಿ ದೊಡ್ಡಬಳ್ಳಾಪುರದ ರಾಜ್ಯ ವ್ಯೆಜ್ಞಾನಿಕ ಸಂಶೋಧನ ಪರಿಷತ್ತು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಶಾಖೆಗಳು, ಮಾನವ ಬಂಧುತ್ವ ವೇದಿಕೆ ಹಾಗೂ ಕುವೆಂಪು ಪ್ರತಿಷ್ಠಾನದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 2 ದಿನಗಳ ಕಾಲ ಆಯೋಜಿಸಿದ್ದ ರಾಜ್ಯ ಮಟ್ಟದ ನಾನೂ ನಾಯಕಿ ಮಹಿಳಾ ನಾಯಕತ್ವ ತರಬೇತಿಯನ್ನು ಹಿಂಗಾರನ್ನು ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾಯಕತ್ವ ಎನ್ನುವುದನ್ನು ಯಾರೂ ಸಹ ಹೇಳಿಕೊಡುವುದಲ್ಲ ಅದು ತನ್ನೊಳಗೆ ಇರುವ ದೊಡ್ಡ ಶಕ್ತಿ. ಅದನ್ನು ಹೊರ ಹಾಕಲು ಇಂತಹ ನಾಯಕತ್ವ ಶಿಬಿರಗಳು ಪ್ರಸ್ತುತ ದಿನಕ್ಕೆ ಅತ್ಯವಶ್ಯಕ. ಪ್ರತಿ ಹೆಣ್ಣಿನ ಒಂದು ಸಣ್ಣ ಸಾಧನೆ ಆ ಮಹಿಳೆಯ ದೊಡ್ಡ ಸಾಧನೆ ಯಾಗಿರುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷ ಸಾಧನೆ ಮಾಡಿದರೆ ಅವರ ಕುಟುಂಬ ಸಂಭ್ರಮಿಸುತ್ತದೆ. ಆದರೆ ಅದೇ ಕುಟುಂಬದ ಮಹಿಳೆ ಸಾಧನೆ ಮಾಡಿದರೆ ಅಭಿನಂದಿಸದೆ ತಿರಸ್ಕರಿಸುವುದನ್ನು ಇಂದಿಗೂ ನಾವು ನೋಡುತ್ತಿ ದ್ದಿದ್ದೇವೆ. ಪ್ರತಿಯೊಬ್ಬ ಮಹಿಳೆ ತಾನು ಅನೇಕ ಸವಾಲುಗಳನ್ನು ಎದುರಿಸಿ ಮೇಲೆ ಬಂದಿರುವುದನ್ನು ಗಮನಿಸ ಬಹುದಾಗಿದೆ. ಯಾರೊಬ್ಬರು ಸುಮ್ಮನೆ ನಾಯಕಿಯಾಗಲಾರರು ಅದರ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ. ನಿರಂತರ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ.. ಮಹಿಳೆಯರು ಒಂದು ಕ್ಷೇತ್ರಕ್ಕೆ ಮೀಸಲಾಗಿರದೆ ರಾಷ್ಟ್ರೀಯ, ಜನಾಂಗಿಯ ಭಾಷವಾರು ಸಾಂಸ್ಕೃತಿಕ, ಆರ್ಥಿಕ, ರಾಜಕೀಯವಾಗಿ ತಮ್ಮದೆಯಾದ ಛಾಪು ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದಿನ ದಿನಗಳಲ್ಲಿ ಸಾಧನೆ ಹಾದಿಯಲ್ಲಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು. ಪರಿಷತ್ತು ಇಂತಹ ಹಾದಿಯಲ್ಲಿ ಸಾಗುತ್ತಿರುವುದು ಅತ್ಯಂತ ಅಭಿನಂದನಿಯ ಎಂದರು.ಖ್ಯಾತ ವೈದ್ಯ ಡಾ. ಆಂಜನಪ್ಪ ತಲ್ಲಣಿಸದಿರುವ ಎನ್ನುವ ವಿಷಯವಾಗಿ ಮಾತನಾಡಿ ಪ್ರತಿಯೊಬ್ಬರಲ್ಲೂ ಅನಾರೋಗ್ಯ ಕಾಡುತ್ತಿದ್ದು ಅದನ್ನು ಮಾನಸಿಕವಾಗಿ ಕಾಣುವ ಮನೋಭಾವನೆ ಹೆಚ್ಚಾಗುತ್ತಿವೆ ಇದರಿಂದ ಆರೋಗ್ಯಯುತವಾಗಿರುವ ಮನುಷ್ಯ ಸಹಜವಾಗಿಯೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಆರೋಗ್ಯದಲ್ಲಿ ವೈಜ್ಞಾನಿಕ ಮನೋಭಾವನೆಯಿಂದ ಕಾಣ ಬೇಕಾಗಿದ್ದು. ಆಹಾರ ಪದ್ಧತಿ, ಜೀವನ ಕ್ರಮಗಳ ಬದಲಾವಣೆಯಿಂದ ಇಂದು ಅನೇಕ ಕಾಯಿಲೆಗಳನ್ನು ತನ್ನದಾಗಿಸಿ ಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ. ಆರೋಗ್ಯ ವ್ಯತ್ಯಾಸವಾದಲ್ಲಿ ಭಯಪಡುವ ಅಗತ್ಯವಿಲ್ಲ. ಹೆಣ್ಣುಮಕ್ಕಳು ಮೂಢ ನಂಬಿಕೆಗಳಿಗೆ ಒಳಗಾಗಿ ಹಲವಾರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ವೈಜ್ಞಾನಿಕ ಚಿಂತನೆಗಳ ಮೂಲಕ ರೋಗ ಮುಕ್ತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ ನಾನೂ ನಾಯಕಿ ಆಗಬೇಕಾದರೆ ಅನೇಕ ಸವಾಲು ಗಳನ್ನು ಎದುರಿಸಬೇಕಾಗಿದೆ. ಪರಿಷತ್ತು ಮನಸ್ಸನ್ನು ಕಟ್ಟುವ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ. ಪರಿಷತ್ತು ರಾಜ್ಯದ ಉದ್ದಗಲಕ್ಕೂ ಅನೇಕ ಕಾರ್ಯಕ್ರಮ ನಡೆಸುತ್ತ ಬಂದಿದೆ. ಹಾಗಾಗಿ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಎಲ್ಲಾರೂ ಕೈ ಜೋಡಿಸಬೇಕಾಗಿ ಕೋರುತ್ತೇನೆ ಎಂದರು.ವೇದಿಕೆಯಲ್ಲಿ ಎಲ್.ಜಿ.ಮೀರಾ, ಡಾ.ಚಿಕ್ಕ ಹನುಮಂತೇಗೌಡ, ವಿ.ಟಿ.ಸ್ವಾಮಿ, ಡಾ.ಉಷಾ ಹಿರೇಮಠ, ಸಿದ್ದಲಿಂಗಮ್ಮ, ಸುರೇಶ್ ಹೊಸೂರು, ಬಿ.ಡಿ.ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.