ಇಲ್ಲಿನ ತಾಲೂಕು ಕಚೇರಿಯಲ್ಲಿ ಕಳೆದ 2 ದಿನಗಳಿಂದ ಕರೆಂಟ್‌ ಕೈ ಕೊಟ್ಟಿದ್ದು, ವಿವಿಧ ದಾಖಲೆಗಳಿಗಾಗಿ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ತಾಲೂಕು ಕಚೇರಿಯಲ್ಲಿ ಕಳೆದ 2 ದಿನಗಳಿಂದ ಕರೆಂಟ್‌ ಕೈ ಕೊಟ್ಟಿದ್ದು, ವಿವಿಧ ದಾಖಲೆಗಳಿಗಾಗಿ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.

ತಾಲೂಕು ಕಚೇರಿಯಲ್ಲಿ ಉಪ ನೋಂದಣಿ ಕಚೇರಿ, ಆಧಾರ್‌ ತಿದ್ದುಪಡಿ ಕೇಂದ್ರ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಭೂಮಿ ಕೇಂದ್ರ, ಪಹಣಿ ವಿತರಣೆ, ಉಪ ಖಜಾನೆ, ಅಬಕಾರಿ, ಆಹಾರ, ಕೇಸ್ವಾನ್‌ ಕೇಂದ್ರ ಮತ್ತು ಭೂ ಮಾಪನ ಇಲಾಖೆ, ಅಭಿಲೇಖಾಲಯ ಸೇರಿದಂತೆ ಈ ಎಲ್ಲ ಇಲಾಖೆಗಳ ಕಚೇರಿಗಳು, ಒಂದೇ ಸೂರಿನಡಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ತಾಂತ್ರಿಕ ಕಾರಣಕ್ಕಾಗಿ ಕಚೇರಿಗೆ ಕರೆಂಟ್‌ ಸ್ಥಗಿತಗೊಂಡಿದೆ.

ಕಂದಾಯ, ಉಪ ನೋಂದಣಿ ಮತ್ತು ಕೇಸ್ವಾನ್‌ಗೆ ಪ್ರತ್ಯೇಕವಾಗಿ ಜನರೇಟರ್‌ ವ್ಯವಸ್ಥೆ ಇದೆ. ಅದಕ್ಕೆ ಇಂಧನ ಹಾಕಿ ಬಳಕೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಉಪ ನೋಂದಣಿ ಇಲಾಖೆಯಲ್ಲಿ ಸರಿಯಾಗಿ ಕರೆಂಟ್‌ ವ್ಯವಸ್ಥೆ ಇಲ್ಲದ ಕಾರಣ ಆಸ್ತಿ ನೋಂದಣಿ ಸೇರಿದಂತೆ, ಇತರ ಕೆಲಸಕ್ಕಾಗಿ ಸಾಕಷ್ಟು ಜನ ಕಚೇರಿ ಮುಂದೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇತ್ತ ಕಂದಾಯ ಇಲಾಖೆಯಿಂದ ನೀಡುವ ಪಹಣಿ ವಿತರಣಾ ಕೇಂದ್ರದ ಮುಂದೆ, ರೈತರು ಕಾಯ್ದು ಸುಸ್ತಾಗಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ತಮ್ಮ ಹಳ್ಳಿ ಕಡೆಗೆ ನಡೆದರು.

ತಾಲೂಕು ಕಚೇರಿಯ ತಳಮಹಡಿಯಲ್ಲಿ ವಿವಿಧ ಕಡೆಗಳಿಗೆ ವಿದ್ಯುತ್‌ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಭಾರಿ ಪ್ರಮಾಣದ ಮಳೆ ಬಂದಾಗ ಈ ತಳಮಹಡಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಈ ನೀರು ವಿದ್ಯುತ್‌ ಪೂರೈಕೆ ಮಾಡುವ ಬಾಕ್ಸ್‌ಗಳಲ್ಲಿ ತುಂಬಿಕೊಳ್ಳುತ್ತದೆ. ಆಗ ಎಲ್ಲ ಕಡೆಗೂ ಕರೆಂಟ್‌ ಸ್ಥಗಿತವಾಗುತ್ತದೆ. ಈ ರೀತಿ ಅನೇಕ ಬಾರಿ ಘಟನೆಗಳು ನಡೆದಿದ್ದರೂ, ಅಧಿಕಾರಿಗಳು ಮಾತ್ರ ಈ ಕುರಿತು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಧಿಕಾರಿಗಳ ಈ ವರ್ತನೆಯಿಂದ ಜನರ ಕೆಲಸ ಕಾರ್ಯಗಳು ಆಗದೇ ಹಿಡಿಶಾಪ ಹಾಕುತ್ತಿದ್ದಾರೆಂದು ಎಐಟಿಯುಸಿ ಸಂಘಟನೆಯ ಹೋರಾಟಗಾರ ಶಾಂತರಾಜ್‌ ಜೈನ್‌ ದೂರಿದ್ದಾರೆ.