ಸಾರಾಂಶ
ಕಲಾದಗಿ : ಉತ್ತರ ಕರ್ನಾಟಕದ ರೈತರ ಹಬ್ಬ ಕಾರ ಹುಣ್ಣಿಮೆಯನ್ನು ರೈತರು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಕಲಾದಗಿ
ಉತ್ತರ ಕರ್ನಾಟಕದ ರೈತರ ಹಬ್ಬ ಕಾರ ಹುಣ್ಣಿಮೆಯನ್ನು ರೈತರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಮಳೆಗಾಲ ಪ್ರಾರಂಭದಲ್ಲಿ ಬರುವ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆ, ವರ್ಷಪೂರ್ತಿ ದುಡಿಮೆ ಮಾಡುವ ಎತ್ತುಗಳಿಗೆ ರೈತರು ಮೊಟ್ಟೆ ಹಾಗು ಎಳ್ಳೆಣ್ಣೆ ಮಿಶ್ರಿತ ವಿಶೇಷ ಆಹಾರವನ್ನು ಗೊಟ್ಟ ಹಾಕಿ ರೈತರು ಎತ್ತುಗಳ ಆರೈಕೆ ಮಾಡುವುದು ವಿಶೇಷವಾಗಿ ಕಂಡು ಬಂತು. ಕಲಾದಗಿಯಲ್ಲಿ ಶನಿವಾರ ಕರಿ ಹರಿಯಲಾಗುತ್ತದೆ.ರೈತಾಪಿ ವರ್ಗ ಬೆಳಗ್ಗೆಯಿಂದಲೇ ಮನೆಯಲ್ಲಿ ಎತ್ತುಗಳ, ದನಕರುಗಳ ಮೈ ತೊಳೆದು ಶೃಂಗಾರ ಮಾಡುವ ಕಾಯಕದಲ್ಲಿ ತೊಡಗಿದ್ದರು. ಎತ್ತುಗಳನ್ನು ಮೈತೊಳೆದು ಹಸಿರು, ಹಳದಿ, ಕೇಸರಿ ಬಣ್ಣ ಹಚ್ಚಿ, ಕೊಂಬಿಗೆ ಬಣ್ಣ ಬಣ್ಣದ ರಿಬ್ಬನ್ ಕಟ್ಟಿದ್ದಲ್ಲದೆ, ಮೈತುಂಬಾ ಬಣ್ಣದ ಚುಕ್ಕೆ ಇಟ್ಟು, ಕೊರಳಿಗೆ, ಹೊಸ ಹಗ್ಗ ಹೂವಿನ ಗೊಂಡೆ, ಗೆಜ್ಜೆ ಸರ, ಜತಗಿ ಬಾರ, ಲಡ್ಡ, ಉಬ್ಬಿಸಿದ ಉಬ್ಬು ಕಟ್ಟಿ ಶೃಂಗಾರ ಮಾಡಿ ಪೂಜೆ ಸಲ್ಲಿಸಿ ಕಡಬು ಕರ್ಚಿಕಾಯಿ ತಿನ್ನಿಸಿದರು. ಶೃಂಗರಿಸಿದ ಎತ್ತುಗಳನ್ನು ಊರ ಅಗಸಿ ಮುಂದೆ ಓಡಿಸಿಕೊಂಡು ಬಂದರು.
ಅಲಂಕಾರಗೊಳಿಸಿದ ಎತ್ತುಗಳ ಕೊರಳಿಗೆ ಕೋಡು ಬಳೆ, ಚಕ್ಕಿಲಿ, ಪಾಪಡಿ ಚೀಲ, ₹ ೧೦ ನೋಟು ಕಟ್ಟಿ ಅಗಸಿಯಲ್ಲಿ ಓಡಿಸಿಕೊಂಡು ಬರುವ ಸಮಯದಲ್ಲಿ ಯುವಕರು ತಿನಿಸು ಖಾದ್ಯವನ್ನು ಎತ್ತುಗಳ ಕೋರಳಿನಿಂದ ಕಿತ್ತು ಹರಿದುಕೊಂಡು ಹಂಚಿ ತಿಂದು ಸಂಭ್ರಮಿಸಿದರು. ಇದನ್ನು ನೊಡಲೆಂದೇ ಗ್ರಾಮದ ಜನರು ಅಗಸಿಯ ಮುಂದೆ, ಮನೆ ಮಾಳಗಿ ಮೇಲೆ ಏರಿ ಅಗಸಿ ಮುಂದೆ ಎತ್ತುಗಳ ಓಟ ಕಂಡು ನೋಡಿ ಖುಷಿ ಪಟ್ಟರು.ಶಾರದಾಳದಲ್ಲಿ ಕರಿ ಹರಿದ ಬಿಳಿ ಎತ್ತು: ಸಂಜೆ ಊರ ಅಗಸಿಯ ಮುಂದೆ ಗೌಡಪ್ಪಗೌಡ ರಾಮನಗೌಡ ಪಾಟೀಲರ ಮನೆಯ ಕೆಂದು ಎತ್ತು ಮತ್ತು ವಿಠಲ ಬಸುನಾಯಕ ಮನೆಯಿಂದ ಬಿಳಿ ಎತ್ತುಗಳನ್ನು ಅಗಸಿಯಲ್ಲಿ ಓಡಿಸಿ ಕರಿ ಹರಿದರು. ಬಿಳಿ ಎತ್ತು ಮುಂದೆ ಓಡಿದ್ದರಿಂದ ಹಿಂಗಾರು ಬೆಳೆ ಹುಲುಸಾಗಿ ಬೆಳೆಯಲಿವೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದರು.