ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 4 ದಿನಗಳ ಕಾಲ ನಡೆದ ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಭಾನುವಾರ ವರ್ಣರಂಜಿತವಾಗಿ ತೆರೆ ಎಳೆಯಲಾಯಿತು. ಅ.15ರಂದು ಹಿರಿಯ ನಟ ಡಾ.ವಿ.ರವಿಚಂದ್ರನ್ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿ ಹೊತ್ತ ಬಂಜೂ ಸವಾರಿ ಮೆರವಣಿಗೆಗೆ ಪುಪ್ಪಾರ್ಚನೆ ಮೂಲಕ ಚಾಲನೆ ನೀಡಿ 416ನೇ ದಸರಾ ಮಹೋತ್ಸವಕ್ಕೆ ನಾಂದಿ ಹಾಡಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 4 ದಿನಗಳ ಕಾಲ ನಡೆದ ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಭಾನುವಾರ ವರ್ಣರಂಜಿತವಾಗಿ ತೆರೆ ಎಳೆಯಲಾಯಿತು.ಅ.15ರಂದು ಹಿರಿಯ ನಟ ಡಾ.ವಿ.ರವಿಚಂದ್ರನ್ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿ ಹೊತ್ತ ಬಂಜೂ ಸವಾರಿ ಮೆರವಣಿಗೆಗೆ ಪುಪ್ಪಾರ್ಚನೆ ಮೂಲಕ ಚಾಲನೆ ನೀಡಿ 416ನೇ ದಸರಾ ಮಹೋತ್ಸವಕ್ಕೆ ನಾಂದಿ ಹಾಡಿದ್ದರು.
ಕಿರಂಗೂರು ಬನ್ನಿ ಮಂಟಪದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದವರೆಗೆ ಸುಮಾರು 3 ಕಿ.ಮೀ. ದೂರ ಜಂಬೂ ಸವಾರಿಯ ರುವಾರಿ ಧನಂಜಯ ಆನೆ ನೇತೃತ್ವದ ಲಕ್ಷ್ಮಿ ಹಾಗೂ ರೂಪ ಎಂಬ ಅನೆಗಳು ಶ್ರೀ ಚಾಮುಂಡೇಶ್ವರಿ ಉತ್ಸವವನ್ನು ಗಜ ಗಾಂಭೀರ್ಯದಿಂದ ಹೊತ್ತು ಸಾಗಿ ಯಶಸ್ವಿಗೊಳಿಸುವ ಮೂಲಕ ಸಾವಿರಾರು ಜನರ ಸಂತಸವನ್ನು ಇಮ್ಮಡಿಗೊಳಿಸಿತ್ತು.ದಸರಾ ದಿಬ್ಬಣ ಸಾಗಿದ ಇಕ್ಕೆಲಗಳಲ್ಲಿ ಸಹಸ್ರಾರು ಮಂದಿ ನಿಂತು, ಕುಳಿತು ಮೆರವಣಿಗೆ ವೀಕ್ಷಣೆ ಮಾಡಿ ದಸರೆಗೂ ಐತಿಹಾಸಿಕ ಮಹತ್ವವಿದೆ ಎಂಬುದನ್ನು ಸಾಕ್ಷೀಕರಿಸಿದರು.
ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಯುವ ಸಂಭ್ರಮ ಜನಮೆಚ್ಚಿಗೆ ಪಡೆಯಿತು. ಜಿಲ್ಲೆಯ ಎಲ್ಲಾ ತಾಲೂಕಿನ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಬೇತಿ ಪಡೆದ ಕಲಾವಿದರಿಗೂ ಸಾಟಿ ಇಲ್ಲ ಎಂಬಂತೆ ಅಮೋಘ ಪ್ರದರ್ಶನ ನೀಡಿ, ಪ್ರೇಕ್ಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.ಬಳಿಕ ಶ್ರೀರಂಗ ವೇದಿಕೆಯಲ್ಲಿ ನಡೆದ ಕಲಾನಿಧಿ ನೃತ್ಯ ಮಂದಿರಂರವರಿಂದ ಚಾಮುಂಡೇಶ್ವರಿ ನೃತ್ಯ, ಸರಿಗಮಪ ತಂಡದ ಖ್ಯಾತ ಗಾಯಕರಿಂದ ಸಂಗೀತ ರಸ ಸಂಜೆ, ಫಿಟ್ ಇಂಡಿಯಾ ಮ್ಯಾರಾಥಾನ್, ಯೋಗಾಸನ, ಹಗ್ಗ ಜಗ್ಗಾಟ, ಗೋಣಿ ಚೀಲದ ಓಟ, ಜೋಡಿ ಒಂಟಿ ಕಾಲಿನ ಓಟ, ಚೆಸ್, ಸಿನಿಮೋತ್ಸವ, ಕವಿಗೋಷ್ಠಿ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹೆಸರಾಂತ ಕೈಲಾಶ್ ಖೇರ್ ಹಾಗೂ ಜಾವೇದ್ ಆಲಿ ಗಾಯಕರುಗಳಿಂದ ಸಂಗೀತ ರಸಸಂಜೆ, ಬೆಟ್ಟ ಹತ್ತುವ ಸ್ಪರ್ಧೆ, ಸಾಮೂಹಿಕ ಸೂರ್ಯ ನಮಸ್ಕಾರ, ವಿಚಾರಗೋಷ್ಠಿ, ಬಿಂದಿಗೆ ಓಟ, ಮಡಿಕೆ ಹೊಡೆಯುವುದು, ದೇಹದಾಡ್ಯ ಸ್ಪರ್ಧೆ ಸೇರಿದಂತೆ ಚಂದನ್ ಶೆಟ್ಟಿ ಮತ್ತು ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಕಾರ್ಯಕ್ರಮಗಳು ವೈವಿಧ್ಯಮಯ ಮತ್ತು ಎಲ್ಲಾ ಕಲಾ ಕ್ಷೇತ್ರಗಳನ್ನೂ ಸ್ಪರ್ಶಿಸಿದ ಸಂಘಟನಾತ್ಮಕ ಹಾಗೂ ಕ್ರಿಯಾಶೀಲತೆಗೆ ಕನ್ನಡಿ ಹಿಡಿದಂತಹ ಕಾರ್ಯಕ್ರಮಗಳು ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ನಡೆಸಿಕೊಟ್ಟರು.ಛದ್ಮವೇಷ ಸ್ಪರ್ಧೆ ಮಕ್ಕಳಿಗೆ ಬಹುಮಾನ ವಿತರಣೆ
ಶ್ರೀರಂಗಪಟ್ಟಣ:ಶ್ರೀರಂಗಪಟ್ಟಣ ದಸರಾ ಅಂಗವಾಗಿ ಭಾನುವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ವಿವಿಧ ವೇಷ ಭೂಷಣ ತೊಟ್ಟ ಮಕ್ಕಳು ಛದ್ಮವೇಷ ಸ್ಪರ್ಧೆಯಲ್ಲಿ ಭಾಗಿಯಾಗಿ ಸಂತಸ ಪಟ್ಟರು. ಶಾಸಕರ ಪತ್ನಿ ಸುಮತಿ ರಮೇಶ್ ಬಂಡಿಸಿದ್ದೇಗೌಡ, ತಹಸೀಲ್ದಾರ್ ಚೇತನಾ ಯಾದವ್, ತಾಪಂ ಇಒ ಚಂದ್ರು, ಸಿಡಿಪಿಒ ಸಕಲೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದು, ಮಕ್ಕಳಿಗೆ ಪ್ರಮಾಣ ಪತ್ರದೊಂದಿಗೆ ಬಹುಮಾನ ವಿತರಿಸಿದರು.ಸ್ವಚ್ಛ ಭಾರತ ಅಭಿಯಾನ ಮಳಿಗೆ ಭೇಟಿ
ಶ್ರೀರಂಗಪಟ್ಟಣಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದ ಶ್ರೀರಂಗ ವೇದಿಕೆ ಬಳಿ ನಗರಾಭಿವೃದ್ಧಿ ಇಲಾಖೆ ಸ್ವಚ್ಛ ಭಾರತ ಅಭಿಯಾನ ಮಳಿಗೆಗೆ ಭೇಟಿ ಕೊಟ್ಟ ಜಿಲ್ಲಾ ಸಹಕಾರ ಒಕ್ಕೂಟಗಳ ಜಿಲ್ಲಾಧ್ಯಕ್ಷ ಎಂ.ನಂದೀಶ್ ಹಾಗೂ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ಎಂ.ಎಲ್.ದಿನೇಶ್ ಅವರು ದಟ್ಟಣ ದಸರಾ ಯಶಸ್ವಿಗೆ ಸಹಕರಿಸಿದ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೌರಕಾರ್ಮಿಕರನ್ನು ಅಭಿನಂದಿಸಿದರು. ಪೌರಾಡಳಿತ ಜಿಲ್ಲಾ ಯೋಜನಾಧಿಕಾರಿ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ವ್ಯವಸ್ಥಾಪಕ ಸೋಮಶೇಖರ್ ಸೇರಿದಂತೆ ಇತರರು ಇದ್ದರು.