ಅಳ್ನಾವರ:

ಸಹಕಾರಿ ಬ್ಯಾಂಕಿನ ಅಭಿವೃದ್ಧಿಗೆ ಆಡಳಿತ ಮಂಡಳಿ ಜತೆಗೆ ಗ್ರಾಹಕರ ಸಹಕಾರ ಅಗತ್ಯವಾಗಿದೆ ಎಂದು ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎಂ.ಸಿ. ಹಿರೇಮಠ ಹೇಳಿದರು.

ಪಟ್ಟಣದ ಅಳಣಾವರ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ನಡೆದ ವಾರ್ಷಿಕ ವ್ಯವಹಾರದ ಸಭೆಯಲ್ಲಿ ಮಾತನಾಡಿದ ಅವರು, ಜಾಗತೀಕ ಮಟ್ಟದಲ್ಲಿ ಹಣಕಾಸಿನ ವ್ಯವಹಾರದ ಏರಿಳಿತಗಳ ನಡುವೆಯೂ ಕಳೆದ ಆರ್ಥಿಕ ವರ್ಷದಲ್ಲಿ ಅಳಣಾವರ ಸೌಹಾರ್ದ ಸಹಕಾರಿಯು ₹65 ಲಕ್ಷಗಳ ನಿವ್ವಳ ಲಾಭ ಗಳಿಸುವ ಮೂಲಕ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ₹ 164.72 ಲಕ್ಷ ಷೇರು ಬಂಡವಾಳ ಹೊಂದಿರುವ ಸಹಕಾರಿಯು ನಿರೀಕ್ಷೆಗಿಂತಲೂ ಹೆಚ್ಚು ಶೇರು ಹಣ ಮತ್ತು ಕಳೆದ ಸಾಲಿಗಿಂತ ₹ 1 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದೆ ಎಂದರು.

ನಿಯಮಿತವಾಗಿ ಪೀಗ್ಮಿ ತುಂಬುವ ಸಣ್ಣ ವ್ಯಾಪಾರಸ್ಥರಿಗೆ ತಮ್ಮ ವ್ಯವಹಾರ ವೃದ್ಧಿಸಿಕೊಳ್ಳಲು ಸಣ್ಣ ಪ್ರಮಾಣದ ಜಾಮೀನು ಸಾಲ ನೀಡಲಾಗುತ್ತಿದೆ. ಗ್ರಾಹಕರ ಹಣಕ್ಕೆ ಭದ್ರತೆ ನೀಡಲು ಸಹಕಾರಿಯು ಬದ್ಧವಾಗಿದೆ ಎಂದು ತಿಳಿಸಿದ ಹಿರೇಮಠ, ಕಳೆದ ಆರ್ಥಿಕ ವರ್ಷದಲ್ಲಿ ₹ 5839.99 ಲಕ್ಷ ವ್ಯವಹಾರ ಮಾಡಿದ್ದು, ₹ 5 ಕೊಟಿ ಸ್ವಂತ ಬಂಡವಾಳ ಹೊಂದಿದೆ ಎಂದು ಹೇಳಿದರು.

ಈ ವೇಳೆ ಉಪಾಧ್ಯಕ್ಷ ಅಮೃತ ಪಟೇಲ, ವೀರೇಶ ಲಿಂಗನಮಠ, ಬಸಯ್ಯ ಹಿರೇಮಠ, ಇಷಾಧಅಹ್ಮದ್‌ ದಾಸ್ತಿಕೊಪ್ಪ, ನಾರಾಯಣ ಮೋರೆ, ಆನಂದ ಪೇಡ್ನೇಕರ, ಡಾ. ದೀಲಿಪಕುಮಾರ ಮನೋಳಿ, ವಿನಾಯಕ ಹಿರೇಮಠ, ಚಂದುಲಾಲ ರಂಗಾನಿ, ಡಾ. ಅಶೋಕ ಟೆಂಕಪ್ಪನವರ, ಲಲಿತಾ ಪಾಟೀಲ, ರೋಹಿಣಿ ತೋರಗಲ್ಮಠ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಭಿಲಾಷ ಪೋಳ ಇದ್ದರು.