ಸಂಸ್ಥೆಯ ಅಡಿಪಾಯದಂತಿರುವ ದಕ್ಷ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸೇವಾ ಮನೋಭಾವನೆಯನ್ನು ಆಡಳಿತ ಮಂಡಳಿ ಹಾಗೂ ನೌಕರ ವರ್ಗ ಕರ್ತವ್ಯದಲ್ಲಿ ಅಳವಡಿಸಿಕೊಂಡಾಗ ಸಂಸ್ಥೆಗಳು ಎತ್ತರಕ್ಕೇರಲು ಸಾಧ್ಯವಿದೆ.

ಅಳ್ನಾವರ:

ಆರು ದಶಕಗಳ ಹಿಂದೆ ಪ್ರಾರಂಭಗೊಂಡಿರುವ ಅಳ್ನಾವರ ಅರ್ಬನ್ ಕೋ-ಆಪ್ ಬ್ಯಾಂಕ್‌ನ 2ನೇ ಶಾಖಾ ಕಚೇರಿಯನ್ನು ಸಮೀಪದ ಕಕ್ಕೇರಿಯಲ್ಲಿ ಬುಧವಾರ ಪ್ರಾರಂಭಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಶಾಖಾ ಕಚೇರಿ ಉದ್ಘಾಟಿಸಿ, ಸಂಸ್ಥೆಯ ಅಡಿಪಾಯದಂತಿರುವ ದಕ್ಷ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸೇವಾ ಮನೋಭಾವನೆಯನ್ನು ಆಡಳಿತ ಮಂಡಳಿ ಹಾಗೂ ನೌಕರ ವರ್ಗ ಕರ್ತವ್ಯದಲ್ಲಿ ಅಳವಡಿಸಿಕೊಂಡಾಗ ಸಂಸ್ಥೆಗಳು ಎತ್ತರಕ್ಕೇರಲು ಸಾಧ್ಯವಿದೆ. ಬ್ಯಾಂಕ್‌ ಆರ್ಥಿಕತೆಯಲ್ಲಿ ಭದ್ರಗೊಳ್ಳುವ ಜತೆಗೆ ಗ್ರಾಹಕರ ಹಿತ ಕಾಪಾಡುವ ಜವಾಬ್ದಾರಿಯು ಮುಖ್ಯವಾಗಿದೆ ಎಂದರು

ಅವರೋಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಮಾತನಾಡಿ, ನಮ್ಮ ಕೌಟುಂಬಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯಕ್ಕೆ ತಕ್ಕಷ್ಟು ಹಣ ವ್ಯಯಿಸುವ ಜತೆಗೆ ಉಳಿತಾಯ ಮನೋಭಾವನೆ ಬೆಳೆಸಿಕೊಂಡು ಸಾಮಾಜಿಕ ಕಾರ್ಯಕ್ಕೂ ಸಮಯ ಮೀಸಲಿಟ್ಟು ಮುನ್ನಡೆದಾಗ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯವಿದೆ. ಹಣಕಾಸು ಸಂಸ್ಥೆಗಳಲ್ಲಿ ಪ್ರಾಮಾಣಿಕತೆಗೆ ಹೆಚ್ಚಿನ ಆದ್ಯತೆ ಸಿಗಲಿದ್ದು ಗ್ರಾಹಕರ ವಿಶ್ವಾಸ ಮುಖ್ಯವಾಗಿದೆ ಎಂದು ಹೇಳಿದರು. ಬ್ಯಾಂಕ್‌ ಅಧ್ಯಕ್ಷ ಶಿವಲಿಂಗ ಜಕಾತಿ ಮಾತನಾಡಿ, ದಿ. ಬಸವಣ್ಣೆಪ್ಪ ಬಸಪ್ಪ ತೇಗೂರ ನೇತೃತ್ವದಲ್ಲಿ ೫೮ ಸದಸ್ಯರರೊಂದಿಗೆ ₹ 26,700 ಶೇರು ಬಂಡವಾಳದೊಂದಿಗೆ 1958ರಲ್ಲಿ ಬಾಡಿಗೆ ಮನೆಯಲ್ಲಿ ಪ್ರಾರಂಭಗೊಂಡ ಬ್ಯಾಂಕ್‌ ಗ್ರಾಹಕರ ಹಾಗೂ ವ್ಯವಹಾರಕ್ಕೆ ಅನುಗುಣವಾಗಿ ಶಾಖೆ ತೆರೆಯಲಾಗಿದೆ. ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಹೆಚ್ಚಿನ ಸೇವೆ ನೀಡಲು ಗಣಕೀರಣ ವ್ಯವಸ್ಥೆಯಡಿ ವ್ಯವಹಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಉಪಾಧ್ಯಕ್ಷ ಜಾವೇದಅನ್ವರ್‌ ತೋಲಗಿ ಪ್ರಾಸ್ತಾವಿಕ, ಬ್ಯಾಂಕ್‌ ಪ್ರಗತಿ ನೋಟ ವಿವರಿಸಿ ಬ್ಯಾಂಕ್‌ ಹಣಕಾಸು ವ್ಯವಹಾರದ ಜತೆಗೆ ಸಾಮಾಜಿಕ ಕಾರ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಶೇರುದಾರರ ಆರ್ಥಿಕ ಪುನಶ್ಚೇತನಕ್ಕೆ ಶ್ರಮಿಸುತ್ತಿದೆ ಎಂದರು.ಈ ವೇಳೆ ರೂಪೇಶ ಗುಂದಕಲ್, ಸಂಧ್ಯಾ ಅಂಬಡಗಟ್ಟಿ, ಅನಂತರಾಮ ಉಡುಪಿ, ರಾಜು ಅಷ್ಟೇಕರ, ಮಲ್ಲಪ್ಪ ಗಾಣಿಗೇರ, ನಾಗರಾಜ ಹಂಜಗಿ, ಫಕ್ಕೀರಪ್ಪ ಮೆದಾರ, ಪ್ರಶಾಂತ ಹೋಸಕೇರಿ, ವರ್ಷಾ ತೇಗೂರ, ಮಲ್ಲಿಕಾರ್ಜುನ ತೇಗೂರ, ವ್ಯವಸ್ಥಾಪಕ ರವೀಂದ್ರ ಪಟ್ಟಣ ಸೇರಿದಂತೆ ಇತರರು ಇದ್ದರು.