ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ಗ್ರಾಮಾಂತರ ಭಾಗದ ಗ್ರಾಹಕರು ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡುವುದಕ್ಕೆ 45 ದಿನ ಕಾಯಬೇಕು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈಗಾಗಲೇ ಸಿಲಿಂಡರ್‌ಗಳ ಸಮರ್ಪಕ ಪೂರೈಕೆಗಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಎಲ್‌ಪಿಜಿ ವಿತರಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ.

ನಗರ, ಪಟ್ಟಣ ಪ್ರದೇಶದ ಗ್ರಾಹಕರು ಒಂದು ಗೃಹಬಳಕೆ ಸಿಲಿಂಡರನ್ನು ಬುಕ್ ಮಾಡಿದ 25 ದಿನಗಳ ನಂತರ ಇನ್ನೊಂದು ಸಿಲಿಂಡರ್ ಅನ್ನು ಬುಕ್ ಮಾಡಲು ಹಾಗೂ ಗ್ರಾಮಾಂತರ ಪ್ರದೇಶದ ಗ್ರಾಹಕರು ಒಂದು ಗೃಹಬಳಕೆ ಸಿಲಿಂಡರನ್ನು ಬುಕ್ ಮಾಡಿದ 45 ದಿನಗಳ ನಂತರ ಇನ್ನೊಂದು ಸಿಲಿಂಡರ್ ಅನ್ನು ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಅಡುಗೆ ಅನಿಲ ಮಿತಬಳಕೆ ಮಾಡುವಂತೆ ಕೋರಲಾಗಿದೆ.


ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ ಪಡೆಯುವಂತೆ ಹಾಗೂ ಗೃಹಬಳಕೆ ಸಿಲಿಂಡರನ್ನು ಈ ಹಿಂದಿನಂತೆ ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡುವುದರಿಂದ ಗ್ರಾಹಕರು ಸಿಲಿಂಡರ್ ಪಡೆಯಲು ಗ್ಯಾಸ್ ಏಜೆನ್ಸಿಗೆ ತೆರಳದಂತೆ ವಿನಂತಿಸಲಾಗಿದೆ. ಎಲ್‌ಪಿಜಿ ವಿತರಣೆಯಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಈ ದೂರವಾಣಿ ಸಂಖ್ಯೆಗಳ (08262-237715, 9483325944) ಮೂಲಕ ಸಂಪರ್ಕಿಸಬಹುದು.

ಯಾವುದೇ ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಅಕ್ರಮ ಮಾರಾಟ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ದಿ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ರೆಗ್ಯೂಲೇಷನ್ ಆಫ್ ಸಪ್ಲೈ ಅಂಡ್ ಡಿಸ್ಟ್ರಿಬ್ಯೂಷನ್) ಆರ್ಡರ್ 2000ರ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಗೃಹಬಳಕೆ ಗ್ಯಾಸ್ ವಿತರಣಾ ವ್ಯವಸ್ಥೆ ಸುಗಮವಾಗಿ ನಡೆಯಲು ಸಹಕರಿಸುವಂತೆ ಕೋರಿದ್ದಾರೆ.