ಸಾರಾಂಶ
ಗ್ರಾಹಕರು ನೀರಿನ ತೆರಿಗೆಯನ್ನು ಸುಲಲಿತವಾಗಿ ಪಾವತಿಸಲು ಗ್ರಾಹಕ ಸ್ನೇಹಿಯಾದ ವಿವಿಧ ಪಾವತಿ ವಿಧಾನಗಳನ್ನು ಮಹಾನಗರ ಪಾಲಿಕೆಯಿಂದ ಪರಿಚಯಿಸಲಾಗಿದೆ.
ಹುಬ್ಬಳ್ಳಿ:
ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮಷೀನ್‌ಗಳು ಗ್ರಾಹಕ ಸ್ನೇಹಿಯಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದು ತಮ್ಮ ನೀರಿನ ತೆರಿಗೆ ಬಾಕಿಯನ್ನು ಇಟ್ಟುಕೊಳ್ಳದೇ ಸಕಾಲಕ್ಕೆ ಪಾವತಿಸಬೇಕು ಎಂದು ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರ ತಿಮ್ಮಪ್ಪ ಹೇಳಿದರು.ಅವರು ಇಲ್ಲಿನ ಐಟಿ ಪಾರ್ಕ್‌ನಲ್ಲಿರುವ ಕೆಯುಐಡಿಎಫ್‌ಸಿ ಹುಬ್ಬಳ್ಳಿ ಯೋಜನಾ ಅನುಷ್ಠಾನ ಘಟಕದ ಕಚೇರಿಯಲ್ಲಿ ಮಂಗಳವಾರ 24/7 ನೀರು ಸರಬರಾಜು ಗ್ರಾಹಕರ ಸೇವಾ ಕೇಂದ್ರಗಳ ಕ್ಯಾಷಿಯರ್‌ಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಹಕರು ನೀರಿನ ತೆರಿಗೆಯನ್ನು ಸುಲಲಿತವಾಗಿ ಪಾವತಿಸಲು ಗ್ರಾಹಕ ಸ್ನೇಹಿಯಾದ ವಿವಿಧ ಪಾವತಿ ವಿಧಾನಗಳನ್ನು ಮಹಾನಗರ ಪಾಲಿಕೆಯಿಂದ ಪರಿಚಯಿಸಲಾಗಿದೆ. ಮಹಾನಗರದ ನಿವಾಸಿಗಳು ತಮ್ಮ ನೀರಿನ ಬಿಲ್‌ಗಳನ್ನು www.hdmcwater.in ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಪಾವತಿಸುವ ವ್ಯವಸ್ಥೆಯನ್ನು ಜುಲೈ 2022ರಿಂದ ಪ್ರಾರಂಭಿಸಿದ್ದು ಉತ್ತಮ ಪ್ರತಿಕ್ರಿಯೆ ಪಡೆದಿದೆ. ಪ್ರಸ್ತುತ ಪಿಒಎಸ್ ಸ್ವೈಪಿಂಗ್ ಮಷಿನ್ ಹೊಸ ತಂತ್ರಜ್ಞಾನದ ಬಳಕೆಯಿಂದ ಗ್ರಾಹಕರು ನೀರಿನ ತೆರಿಗೆಯನ್ನು ನಗದು ರಹಿತವಾಗಿ ಪಾವತಿಸುವ ವ್ಯವಸ್ಥೆಯನ್ನು ಮೊದಲ ಹಂತವಾಗಿ ಪರಿಚಯಿಸಲಾಗುತ್ತಿದೆ. ಈಗ ಈ ಮಷೀನ್‌ಗಳನ್ನು ಸಾಫ್ಟ್‌ವೇರ್ ಇಂಟಿಗ್ರೇಟ್ ಮಾಡುವ ಕಾರ್ಯ ಚಾಲನೆಯಲ್ಲಿದ್ದು, ಪ್ರಾತ್ಯಕ್ಷಿಕವಾಗಿ ಪಿಒಎಸ್ ಮಷಿನ್‌ಗಳನ್ನು ಬಳಕೆ ಮಾಡಿಕೊಳ್ಳಲು ಯೋಜಿಸಲಾಗಿದೆ. ಆ ಮೂಲಕ ಗ್ರಾಹಕರು ಡೆಬಿಟ್ ಹಾಗೂ ಕೆಡಿಟ್ ಕಾರ್ಡ್ ಬಳಸಿ ನೀರಿನ ತೆರಿಗೆ ಪಾವತಿಸಬಹುದು. ಕ್ಯೂ ಆರ್ ಕೋಡ್ ಬಳಸಿಯೂ ಪಾವತಿಸಬಹುದು ಎಂದರು.ನೀರಿನ ತೆರಿಗೆ ಪಾವತಿಸಿದ ತಕ್ಷಣ ತ್ವರಿತಗತಿಯಲ್ಲಿ ರಶಿದಿ ಪಡೆಯಬಹುದು ಎಂದು ಇದೇ ವೇಳೆ ತಿಳಿಸಿದರು.
ಗ್ರಾಹಕರ ಸೇವಾ ಕೇಂದ್ರಗಳಾದ ಹುಬ್ಬಳ್ಳಿಯ ಸಬ್ ಜೈಲ್ ಹತ್ತಿರ ಮನೆ ಸಂಖ್ಯೆ 85, ಹಳೆಯ ವಲಯ ಕಚೇರಿ ಸಂಖ್ಯೆ 5, ಹೆಗ್ಗೇರಿಯ ಸಮುದಾಯ ಸಂಪರ್ಕ ಕೋಶ, ಹು-ಧಾ ಮಹಾನಗರ ಪಾಲಿಕೆ ವಲಯ ಕಚೇರಿ ಸಂಖ್ಯೆ 10, ಧಾರವಾಡದ ರವಿವಾರ ಪೇಟೆಯ ಮನೆ ಸಂ: 78, ಕಲಾಭವನದಲ್ಲಿರುವ ಪಾಲಿಕೆ ವಲಯ ಕಚೇರಿ ಸಂಖ್ಯೆ 3ರಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಿ ಸೇವೆ ನೀಡಲಾಗುವುದು ಎಂದರು. ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.