ರಾತ್ರೋರಾತ್ರಿ ಶ್ರೀಗಂಧದ ಮರ ಕತ್ತರಿಸಿಕೊಂಡು ಪರಾರಿ

| Published : Nov 10 2023, 01:00 AM IST

ಸಾರಾಂಶ

ಶ್ರೀಗಂಧದ ಮರವನ್ನು ರಾತ್ರೋರಾತ್ರಿ ಕತ್ತರಿಸಿ ಸಾಗಾಟ ಮಾಡಿದ ಘಟನೆ ಪಟ್ಟಣದ ನೆಹರುನಗರದಲ್ಲಿನ ಮನೆಯೊಂದರಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಶ್ರೀಗಂಧದ ಮರವನ್ನು ರಾತ್ರೋರಾತ್ರಿ ಕತ್ತರಿಸಿ ಸಾಗಾಟ ಮಾಡಿದ ಘಟನೆ ಪಟ್ಟಣದ ನೆಹರುನಗರದಲ್ಲಿನ ಮನೆಯೊಂದರಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಇಲ್ಲಿನ ನಿವಾಸಿ ಮಹೇಶ್ವರಿ ಚಂದ್ರಾಪಟ್ಟಣ ಎಂಬವರ ಮನೆಯ ಕಾಂಪೌಂಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಮರ ಬೆಳೆಸಲಾಗಿತ್ತು. ತಡರಾತ್ರಿ 1 ಗಂಟೆ ಸುಮಾರಿಗೆ ಮನೆ ಕಾಂಪೌಂಡ್‌ ಒಳಗೆ ಆಗಮಿಸಿದ ಕಳ್ಳರ ತಂಡವು ಮನೆಯ ಬಾಗಿಲನ್ನು ಹೊರಗಡೆಯಿಂದ ಹಾಕಿ ಬೆಲೆ ಬಾಳುವ ಶ್ರೀಗಂಧದ ಮರ ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಮನೆಯವರು ಎಚ್ಚರಗೊಂಡು ಕೂಗಾಟ ಆರಂಭಿಸಿದರಾದರೂ ಪ್ರಯೋಜನವಾಗಲಿಲ್ಲ, ಕಬ್ಬಿಣದ ರಾಡ್‌ಗಳನ್ನು ತೋರಿಸಿ ಭಯಗೊಳ್ಳುವಂತೆ ಮಾಡಿ ಕತ್ತರಿಸಿದ್ದ ಶ್ರೀಗಂಧದ ತುಂಡನ್ನು ಹೊತ್ತು ಓಡಿದ್ದಾರೆ.

ಸಿಸಿ ಟಿವಿಯಲ್ಲಿ ಕೃತ್ಯ ದಾಖಲು:

ಚಂದ್ರಾಪಟ್ಟಣ ಅವರ ಮನೆಗೆ ಹೊಂದಿಕೊಂಡು ಪುರಸಭೆ ಮಾಜಿ ಸದಸ್ಯ ಬಸವರಾಜ ಹಂಜಿ ಅವರ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯವೆಸೆಗಿದ ದೃಶ್ಯ ಸೆರೆಯಾಗಿದೆ.

ಹೆಚ್ಚುತ್ತಿರುವ ಶ್ರೀಗಂಧ ಮರಗಳ್ಳತನ:

ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಶ್ರೀಗಂಧ ಮರಗಳ್ಳತನ ಯಥೇಚ್ಚವಾಗಿ ನಡೆಯುತ್ತಿದೆ. ಮರಗಳ್ಳರ ತಂಡವೊಂದು ಸಕ್ರಿಯವಾಗಿದ್ದು ಶ್ರೀಗಂಧದ ಮರಗಳನ್ನು ಕತ್ತರಿಸಿಕೊಂಡು ಪರಾರಿಯಾಗುತ್ತಿದೆ. ಮರವನ್ನು ಕಡಿಯುವ ಪರಿಕರಗಳು ಸೇರಿದಂತೆ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮರಗಳ್ಳರನ್ನು ಪತ್ತೆ ಹಚ್ಚಲು ಹುಡುಕಾಟ ನಡೆಸಿದ್ದಾರೆ.

ಶ್ರೀಗಂಧಕ್ಕಾಗಿ 5 ಜನರಿದ್ದ ತಂಡವೊಂದು ಮನೆಯ ಕಾಂಪೌಂಡ್‌ನೊಳಗೆ ನುಗ್ಗಿದ್ದರು. ಮರ ಕಡಿಯುತ್ತಿರುವ ಸಪ್ಪಳ ಕೇಳಿ ಕಿಟಕಿ ತೆರೆದು ನೋಡಿದಾಗ ಖಚಿತವಾಯಿತು. ಬಾಗಿಲು ತೆಗೆದು ಹೊರಗೆ ಬರೋಣವೆಂದರೆ ಹೊರಗಡೆಯಿಂದ ಚಿಲಕ ಹಾಕಿದ್ದ ಕಳ್ಳರು ಕಬ್ಬಿಣದ ರಾಡ್‌ಗಳನ್ನು ತೋರಿಸಿ ನಮ್ಮನ್ನು ಹೆದರಿಸಿದರು ಎನ್ನುತ್ತಾರೆ ಮನೆಯೊಡತಿ ಮಹೇಶ್ವರಿ ಚಂದ್ರಾಪಟ್ಟಣ.