ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗಿದ್ದು ಕೆಲ ಖಾಸಗಿ ಶಾಲೆಗಳು ಪ್ರವೇಶ ಫೀ ನೆಪದಲ್ಲಿ ಸಾವಿರಾರು ರೂಪಾಯಿ ಪಡೆಯುತ್ತಿರುವ ದೂರುಗಳು ಬಂದಿವೆ. ಈ ಕುರಿತು ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
ಕುಷ್ಟಗಿ:
ಖಾಸಗಿ ಶಾಲೆಗಳು ಪ್ರವೇಶ ಫೀ ನೆಪದಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವ ಆರೋಪವಿದ್ದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಎಂದು ಹೇಳಿದರು.ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗಿದ್ದು ಕೆಲ ಖಾಸಗಿ ಶಾಲೆಗಳು ಪ್ರವೇಶ ಫೀ ನೆಪದಲ್ಲಿ ಸಾವಿರಾರು ರೂಪಾಯಿ ಪಡೆಯುತ್ತಿರುವ ದೂರುಗಳು ಬಂದಿವೆ. ಈ ಕುರಿತು ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಅಂತಹವು ಕಂಡು ಬಂದಲ್ಲಿ ಪರವಾನಗಿ ರದ್ದುಗೊಳಿಸಬೇಕೆಂದು ಬಿಇಒ ಸುರೇಂದ್ರ ಕಾಂಬಳೆ ಅವರಿಗೆ ಸೂಚಿಸಿದರು. ಅಲ್ಲದೇ ಪ್ರಸಕ್ತ ವರ್ಷ ಶೈಕ್ಷಣಿಕ ಸುಧಾರಣೆಗೆ ಖಾಲಿ ಇರುವ ಸ್ಥಾನದಲ್ಲಿ ಅತಿಥಿ ಶಿಕ್ಷರನ್ನು ನೇಮಕ ಮಾಡಿಕೊಂಡು ಉತ್ತಮ ಶಿಕ್ಷಣ ನೀಡಬೇಕು ಎಂದರು.ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಈಗಾಗಲೇ ಎಲ್ಲ ಖಾಸಗಿ ಶಾಲೆಗಳಲ್ಲಿ ಫೀ ಕುರಿತು ನೋಟಿಸ್ ಬೋರ್ಡ್‌ನಲ್ಲಿ ಹಾಕಲು ತಿಳಿಸಲಾಗಿದೆ. ಶೀಘ್ರವೇ ಸಭೆ ನಡೆಸಿ ಫೀ ವಸೂಲಿ ಮಾಡದಂತೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.
ಹೊಸ ಕಟ್ಟಡ ಹಾಗೂ ಸುಣ್ಣ-ಬಣ್ಣದ ಕಾಮಗಾರಿಗಳು ಆಮೆಗತಿಯಲ್ಲಿವೆ. ಶಾಲೆಗಳು ಪ್ರಾರಂಭವಾದರು ಸಹ ಕೆಲವು ಕಟ್ಟಡಗಳು ಇನ್ನೂ ಹಸ್ತಾಂತರವಾಗಿಲ್ಲ ಎಂದು ಬಿಇಒ ಹೇಳಿದರು. ಆಗ ಶಾಸಕರು, ನಿರ್ಮಿತಿ ಕೇಂದ್ರದ ಜೆಇ ಆದೇಶ ಗುಡಿಹಾಳ ಅವರಿಗೆ ಕೂಡಲೇ ಸಂಪೂರ್ಣಗೊಂಡ ಶಾಲಾ ಕೊಠಡಿ ಹಸ್ತಾಂತರಿಸುವಂತೆ ಸೂಚಿಸಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಮಾತನಾಡಿ, ರೈತರಿಗೆ ತಾಡಪತ್ರೆ ವಿತರಣೆ ಕಾರ್ಯ ನಡೆದಿದ್ದು ಕೆ ಕಿಸಾನ್ ಆಪ್ ಮೂಲಕ ಪ್ರೂಟ್ಸ್ ಐಡಿ ಇದ್ದಲ್ಲಿ ಮಾತ್ರ ವಿತರಿಸಲಾಗುತ್ತಿದೆ ಎಂದ ಅವರು, ಮುಂಗಾರು ಹಂಗಾಮಿನಲ್ಲಿ ಬೀಜ ವಿತರಣೆ ಕಾರ್ಯ ನಡೆದಿದ್ದು 1233 ಕ್ವಿಂಟಲ್ ಬೀಜ ವಿತರಿಸಲಾಗಿದೆ. ಡಿಎಪಿ ಗೊಬ್ಬರದ ಅಭಾವ ಇದ್ದು ಪರ್ಯಾಯವಾಗಿ ಬೇರೆ ಗೊಬ್ಬರ ಬಳಕೆಗೆ ರೈತರು ಮುಂದಾಗಬೇಕು ಎಂದರು.
ಕೆಡಿಪಿ ಸದಸ್ಯರು ಬಿತ್ತನೆ ಬೀಜ ವಿತರಣೆ ಕೇಂದ್ರವನ್ನು ಮುದೇನೂರು. ಹಿರೇಮನ್ನಾಪುರು, ಹಿರೇಗೊಣ್ಣಾಗರ ಗ್ರಾಮದಲ್ಲಿ ಆರಂಭಿಸಬೇಕು. ಇಲ್ಲವೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಬೀಜ ವಿತರಿಸಬೇಕು. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.ವಸತಿ ನಿಲಯಗಳ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ 246 ಉದ್ಯಾನವನಗಳಿದ್ದು ಒತ್ತುವರಿ ತೆರವು ಕಾರ್ಯ ನಡೆದಿದೆ. ಕೃಷ್ಣಗಿರಿ ಕಾಲನಿಯ ಉದ್ಯಾನವನ್ನು ಮಾದರಿ ಉದ್ಯಾನವನ ಮಾಡಲು ₹ 10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯತ್ತ ಗಮನವಹಿಸಲಾಗಿದೆ ಎಂದರು.ಇದೇ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ವರದಿ ಒಪ್ಪಿಸಿದರು.
ಈ ವೇಳೆ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ, ಶೇಖರಗೌಡ ಮಾಲಿಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಗೋಪಾಲರಾವ ಕುಲಕರ್ಣಿ, ಶ್ಯಾಮರಾವ ಕುಲಕರ್ಣಿ, ಯಲ್ಲಪ್ಪ ಬಾಗಲಿ ಸೇರಿದಂತೆ ಕೆಡಿಪಿ ನಾಮನಿರ್ದೇಶಿತ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಆಸ್ತಿ ರಕ್ಷಣೆಗೆ ಕೈಜೋಡಿಸಿಸರ್ಕಾರಿ ಆಸ್ತಿಗಳ ಒತ್ತುವರಿ ತೆರವು, ಕಾಮಗಾರಿ ತಡೆಹಿಡಿಯುವುದು ಕಂಡುಬಂದಲ್ಲಿ ಆಸ್ತಿಗಳ ರಕ್ಷಣೆಗೆ ಇಲಾಖೆ ಅಧಿಕಾರಿಗಳ ಜತೆಗೆ ಕೈಜೋಡಿಸಬೇಕು. ಪಟ್ಟಣದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸೂಚಿಸಲು ಕ್ರಮವಹಿಸಬೇಕು ಎಂದು ಪಿಎಸೈ ಹನಮಂತಪ್ಪ ತಳವಾರಗೆ ಶಾಸಕರು ಸೂಚಿಸಿದರು.
ಕನ್ನಡಪ್ರಭ ಪ್ರತಿಧ್ವನಿ:ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಎರಡೇ ತಿಂಗಳಲ್ಲಿ ಬಿರುಕು ಬಿಟ್ಟಿದೆ ಎಂದು ಕನ್ನಡಪ್ರಭ ಜೂ.2ರಂದು ಪ್ರಕಟಿಸಿದ ವರದಿ ಸಭೆಯಲ್ಲಿ ಪ್ರತಿಧ್ವನಿಸಿತು. ಟಿಎಟಿಸಿಎಂಸ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಕನ್ನಡಪ್ರಭ ವರದಿಯನ್ನು ಶಾಸಕರಿಗೆ ತೋರಿಸಿ ಕಾಮಗಾರಿ ಕಳಪೆಯಾಗಲು ಕಾರಣವೇನು? ಇದಕ್ಕೆ ಏನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಆಗ ಶಾಸಕ ದೊಡ್ಡನಗೌಡ ಪಾಟೀಲ,ಮಾಲಗಿತ್ತಿ ಪಿಡಿಒ ಚಂದಪ್ಪ ಗುಡಿಮನಿ ಅವರಿಗೆ ಕಾಮಗಾರಿ ಪರಿಶೀಲಿಸಬೇಕು. ಗುಣಮಟ್ಟದ ರಸ್ತೆ ನಿರ್ಮಿಸಿ ಚರಂಡಿ ಮಾಡಿದ ಬಳಿಕ ಗುತ್ತಿಗೆದಾರನಿಗೆ ಬಿಲ್ ಪಾವತಿಸಬೇಕೆಂದು ಸೂಚಿಸಿದರು. ಆಗ ಪಿಡಿಒ, ಪೂರ್ಣ ಪ್ರಮಾಣದ ಬಿಲ್ ನೀಡಿಲ್ಲ. ಕಾಮಗಾರಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅನುಪಾಲನ ವರದಿಗಾಗಿ ಶಾಸಕ ಗರಂ:ಸಭೆಗೆ ಇಲಾಖೆ ಅಧಿಕಾರಿಗಳು ಅನುಪಾಲನ ವರದಿ ತರದೆ ಇರುವುದರಿಂದ ಶಾಸಕ ದೊಡ್ಡನಗೌಡ ಪಾಟೀಲ ಗರಂ ಆದರು. ಅನುಪಾಲನ ವರದಿ ಇಲ್ಲದೆ ಹೋದರೆ ಸಭೆಗೆ ಏನು ಅರ್ಥ ಬರುತ್ತದೆ. ಪ್ರತಿ ಸಲ ಹೇಳಬೇಕೆ. ಏಕೆ ತರುತ್ತಿಲ್ಲ ಎಂದು ತರಾಟೆಗೆ ತೆಗದುಕೊಂಡರು. ಕೊನೆಗೆ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರಿಗೆ ಕರೆ ಮಾಡಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದರು.