ಸಾರಾಂಶ
ಬೀಡಿ ಕಾರ್ಮಿಕರ ಕನಿಷ್ಟ ವೇತನವನ್ನು ೩೧೫ ರು.ನಿಂದ ೨೭೦ ರು.ಗೆ ಇಳಿಸಿ ಹೊಸ ಆದೇಶ ಮಾಡಿದ ಸರ್ಕಾರದ ನಡೆಯನ್ನು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘ (ಸಿಐಟಿಯು) ಅಧ್ಯಕ್ಷ ನ್ಯಾಯವಾದಿ ಪಿ.ಕೆ.ಸತೀಶನ್ ಮತ್ತು ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ತೀವ್ರವಾಗಿ ಖಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಬೀಡಿ ಕಾರ್ಮಿಕರ ಕನಿಷ್ಟ ವೇತನವನ್ನು ೩೧೫ ರು.ನಿಂದ ೨೭೦ ರು.ಗೆ ಇಳಿಸಿ ಹೊಸ ಆದೇಶ ಮಾಡಿದ ಸರ್ಕಾರದ ನಡೆಯನ್ನು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘ (ಸಿಐಟಿಯು) ಅಧ್ಯಕ್ಷ ನ್ಯಾಯವಾದಿ ಪಿ.ಕೆ.ಸತೀಶನ್ ಮತ್ತು ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ತೀವ್ರವಾಗಿ ಖಂಡಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಮಾಲಕರ ಪರವಾಗಿ ಕಾರ್ಮಿಕರ ವಿರುದ್ಧವಾಗಿ ಹೊಸ ಕನಿಷ್ಟ ವೇತನವನ್ನು ಹಿಮ್ಮುಖವಾಗಿ ನಿಗದಿ ಪಡಿಸಿ ಆದೇಶ ಮಾಡಿ ರಾಜ್ಯದಲ್ಲಿರುವ ೭ ಲಕ್ಷದಷ್ಟು ಬೀಡಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ.ಸರ್ಕಾರದ ಈ ನಡೆ ನ್ಯಾಯೋಜಿತವಾಗಿಲ್ಲ. ಬೆಲೆ ಏರಿಕೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ, ಮಂತ್ರಿಗಳ ಸಂಬಳ, ಭತ್ಯೆಯನ್ನು ಏರಿಸಿಕೊಂಡ ಇದೇ ಸರ್ಕಾರ, ಇದೀಗ ಬೀಡಿ ಕಾರ್ಮಿಕರಿಗೆ ಮಾತ್ರ ಬೆಲೆ ಏರಿಕೆ ಆಗಿಲ್ಲ ಹಣದುಬ್ಬರ ಆಗಿಲ್ಲ ಎಂದು ಹೇಳುವಂತಿದೆ ಈ ಆದೇಶ. ಬೀಡಿ ಮಾಲಕರಿಗೆ ಸಾವಿರಾರು ಕೋಟಿ ರುಪಾಯಿ ಉಳಿಸಿಕೊಟ್ಟ ಈ ಆದೇಶದ ಹಿಂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಅನುಮಾನವಿದೆ. ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಸಮಗ್ರ ತನಿಖೆಗೆ ಆದೇಶಿಸುವಂತೆ ಮತ್ತು ಈ ಕಾರ್ಮಿಕ ವಿರೋಧಿ ಆದೇಶವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಸರ್ಕಾರದ ಈ ಆದೇಶದ ವಿರುದ್ಧ ನ್ಯಾಯಕ್ಕಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.