ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನೌಷಧಿ ಕೇಂದ್ರಕ್ಕೆ ಬೀಗ ಹಾಕಿ ಮುಚ್ಚಿ ತಿಂಗಳಾಗಿ ಹೋಯಿತು. ಕಡಿಮೆ ಹಣಕ್ಕೆ ದೊರೆಯುತ್ತಿದ್ದ ವಿವಿಧ ಔಷಧಗಳು ಬಡವರ ಪಾಲಿಗೆ ಇಲ್ಲದಾಗಿದ್ದು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಔಷಧಿಗಳು ಸಿಗುವ ಯಾವುದೇ ಖಾತರಿ ಇಲ್ಲದಾಗಿದೆ.

ಎಸ್.ನಾಗಭೂಷಣ ಕನ್ನಡಪ್ರಭ ವಾರ್ತೆ ತುರುವೇಕೆರೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನೌಷಧಿ ಕೇಂದ್ರಕ್ಕೆ ಬೀಗ ಹಾಕಿ ಮುಚ್ಚಿ ತಿಂಗಳಾಗಿ ಹೋಯಿತು. ಕಡಿಮೆ ಹಣಕ್ಕೆ ದೊರೆಯುತ್ತಿದ್ದ ವಿವಿಧ ಔಷಧಗಳು ಬಡವರ ಪಾಲಿಗೆ ಇಲ್ಲದಾಗಿದ್ದು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಔಷಧಿಗಳು ಸಿಗುವ ಯಾವುದೇ ಖಾತರಿ ಇಲ್ಲದಾಗಿದೆ.

ಪ್ರತಿದಿನ ನೂರಾರು ಮಂದಿ ಬಡವರು ತಮಗೆ ಅಗತ್ಯವಿದ್ದ ಹಲವಾರು ರೋಗಗಳಿಗೆ ಸಂಬಂಧಿಸಿದ ಔಷಧಗಳನ್ನು ಕಡಿಮೆ ಬೆಲೆಗೆ ಪಡೆಯುತ್ತಿದ್ದರು. ಸರಿ ಸುಮಾರು ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಶೇಕಡಾ 60 ರಿಂದ 80 ರಷ್ಟು ಹಣ ಬಡವರಿಗೆ ಉಳಿತಾಯವಾಗುತ್ತಿತ್ತು. ಈಗ ಈ ಜನೌಷಧಿ ಕೇಂದ್ರ ಮುಚ್ಚಿರುವುದರಿಂದ ಬಡವರ ಜೇಬಿಗೆ ಕತ್ತರಿ ಬೀಳುತ್ತಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಡವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರು ಸರ್ಕಾರಿ ಆಸ್ಪತ್ರೆಗಳ ಆವರಣದೊಳಗೆ ಇರುವ ಎಲ್ಲಾ ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಇದರ ಫಲವಾಗಿ ತುರುವೇಕೆರೆಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧಿ ಕೇಂದ್ರಕ್ಕೂ ಸಂಚಕಾರ ಬಂದಿತ್ತು. ಈ ಕೇಂದ್ರವನ್ನು ಮುಚ್ಚಿ ತಿಂಗಳಾಯಿತು. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಿ ಚಕಾರ ಎತ್ತದಿರುವುದು ದುರಂತವೇ ಸರಿ. ಆರೋಗ್ಯ ಸಚಿವರು ತಮ್ಮ ಸರ್ಕಾರಿ ಆಸ್ಪತ್ರೆಗಳಲ್ಲೇ ಜನರಿಗೆ ಅಗತ್ಯವಿರುವ ಎಲ್ಲಾ ಔಷಧಗಳನ್ನು ಉಚಿತವಾಗಿ ಕೊಡುತ್ತಿರಬೇಕಾದರೆ ಜನೌಷಧಿ ಕೇಂದ್ರದ ಅಗತ್ಯವಿಲ್ಲ ಎಂದು ಹೇಳಿ ಎಲ್ಲಾ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿದ್ದಾರೆ. ಆದರೆ ಜನರಿಗೆ ಅಗತ್ಯವಿರುವ ಎಷ್ಟೋ ಔಷಧಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತಿಲ್ಲ. ಸರಬರಾಜೇ ಇಲ್ಲ. ಜನರಿಗೆ ಬಿಪಿ, ಶುಗರ್ ಸೇರಿದಂತೆ ಹಲವಾರು ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಪ್ರತಿದಿನಾ ತೆಗೆದುಕೊಳ್ಳಬೇಕಿದ್ದ ಔಷಧಗಳನ್ನು ಕಡಿಮೆ ಹಣದಲ್ಲಿ ಅಂದರೆ ಮಾರುಕಟ್ಟೆ ಬೆಲೆಗಿಂತ ಶೇಕಡಾ 30 ರಷ್ಟು ಹಣ ನೀಡಿ ಈ ಜನೌಷಧಿ ಕೇಂದ್ರದಿಂದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು. ತಿಂಗಳಲ್ಲಿ ಕನಿಷ್ಠವೆಂದರೂ ಸರಾಸರಿ ಸಾವಿರ ರೂ ಉಳಿತಾಯವಾಗುತ್ತಿತ್ತು. ಈಗ ಹೆಚ್ಚುವರಿ ಹಣ ಹೊಂಚಬೇಕಲ್ಲಾ ಎಂಬುದು ಜನರ ನೋವಾಗಿದೆ. ಇಲ್ಲಿಯ ಜನೌಷಧಿ ಕೇಂದ್ರದಲ್ಲಿ ಬಿಪಿ, ಶುಗರ್, ಪೇನ್ ಕಿಲ್ಲರ್, ಗ್ಲೂಕೋಸ್, ಇನ್ಸುಲಿನ್, ಆಂಟಿಬಯೋಟಿಕ್, ಆಯಿಂಟ್ ಮೆಂಟ್. ನಾಸಲ್ ಡ್ರಾಪ್, ಚರ್ಮ ವ್ಯಾಧಿಯ ಔಷಧಿ, ಪ್ರೋಟೀನ್ ಪೌಡರ್, ಶುಗರ್ ಲೆವಲ್ ಚೆಕಪ್ ಮೆಷಿನ್, ಹೃದಯ ಸಂಬಂಧಿಸಿದ ಖಾಯಿಲೆ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದ ಸಾವಿರಾರು ಔಷಧಗಳು ಬಹಳ ರಿಯಾಯಿತಿ ದರದಲ್ಲಿ ದೊರೆಯುತ್ತಿತ್ತು. ಈಗ ಇವೆಲ್ಲವೂ ಇಲ್ಲದಾಗಿದೆ. ಸರ್ಕಾರಿ ಆಸ್ಪತ್ರೆಯ ಆವರಣದಿಂದ ತೆಗೆದ ಮೇಲೆ ಬೇರೆ ಕಡೆಯಾದರೂ ಈ ಜನೌಷಧಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬಹುದಾಗಿತ್ತು. ಹೋಗಲಿ ಇಲ್ಲಿ ದೊರೆಯುವ ಔಷಧಗಳು ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುತ್ತವೆಯೇ ಎಂಬುದು ನಂಬಲಸಾಧ್ಯವಾಗಿದೆ. ಹೀಗಿರುವಾಗ ಜನರು ಈ ಸರ್ಕಾರದ ಕ್ರಮದ ಬಗ್ಗೆ ವ್ಯಗ್ರರಾಗಿದ್ದಾರೆ. ಜನೌಷಧಿ ಕೇಂದ್ರ ಮುಚ್ಚಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂಬ ಸಂಗತಿ ಶಾಸಕರು, ಸಂಸದರಿಗೂ ಗೊತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಶೋಚನೀಯ ಜನೌಷಧಿ ಕೇಂದ್ರ ಬಡವರ ಪಾಲಿಗೆ ಕಾಮಧೇನು ವಾಗಿತ್ತು. ಈಗ ಪುನಃ ಪ್ರಾರಂಭ ಮಾಡಿ ಎಂದು ಗೊಗರೆಯುವ ಬಡವರ ಕೂಗು ಗಿರಿಗೆ ಮುಟ್ಟುವುದೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಔಷಧಿ ಮಾಫಿಯಾ ಕೈ ವಾಡ ಶಂಕೆ

ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲು ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರಿಗೆ ಕಡಿಮೆ ಹಣದಲ್ಲಿ ಉತ್ತಮ ಔಷಧಿ ದೊರೆಯಲಿ ಎಂದು ಪ್ರಾರಂಭಿಸಿರುವ ಜನೌಷಧಿ ಕೇಂದ್ರ ಬಡವರಿಗೆ ಅನುಕೂಲವಾಗಿ ನರೇಂದ್ರ ಮೋದಿಯವರನ್ನು ಪ್ರೀತಿಸುತ್ತಾರೆ ಎಂಬ ಒಂದು ಉದ್ದೇಶವಾದರೆ, ಔಷಧಿ ಮಾಫಿಯಾವೂ ಇದರ ಹಿಂದೆ ಇದೆ ಎಂಬುದು ಗುಲ್ಲಾಗಿದೆ.