ಮಾದಾಪುರದಲ್ಲಿ ಮರಗಳನ್ನು ಕಡಿದು ಮಾರಾಟ

| Published : Jun 07 2024, 12:30 AM IST

ಸಾರಾಂಶ

ತಾಲೂಕಿನ ಮಾದಾಪುರ ಗ್ರಾಪಂ ವ್ಯಾಪ್ತಿಗೆ ಸೇರಿದ ಮಾದಾಪುರ ಗ್ರಾಮದಲ್ಲಿರುವ ಬೆಲೆ ಬಾಳುವ ಲಕ್ಷಾಂತರ ರು. ಮೌಲ್ಯದ ಮರಗಳನ್ನು ಕತ್ತರಿಸಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಮಾದಾಪುರ ಗ್ರಾಪಂ ವ್ಯಾಪ್ತಿಗೆ ಸೇರಿದ ಮಾದಾಪುರ ಗ್ರಾಮದಲ್ಲಿರುವ ಬೆಲೆ ಬಾಳುವ ಲಕ್ಷಾಂತರ ರು. ಮೌಲ್ಯದ ಮರಗಳನ್ನು ಕತ್ತರಿಸಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ವೀರಯ್ಯನಕಟ್ಟೆ ಹಾಗೂ ಕೆರೆ ಏರಿಯಲ್ಲಿ ೨೦ಕ್ಕೂ ಹೆಚ್ಚು ಬೇವಿನ ಮರ ಹಾಗೂ ಇತರೆ ಸಾಗುವಾನಿ ಮರಗಳನ್ನು ಯಾರ ಗಮನಕ್ಕೂ ತರದೇ ಗ್ರಾಮದ ರವಿಕುಮಾರ್ ಬಿನ್ ಲೇಟ್ ನಂಜಶೆಟ್ಟಿ ಎಂಬ ವ್ಯಕ್ತಿ ರಾಜಾರೋಷವಾಗಿ ಕತ್ತರಿಸಿ ಮಾರಾಟ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭಾಗ್ಯಲಕ್ಷ್ಮಿ ಅವರಿಗೆ ಮೌಖಿಕವಾಗಿ ತಿಳಿಸಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಹೇಳಿದರು ಉಡಾಫೆಯಾಗಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ ಎರಡೇ ದಿನಕ್ಕೆ ಮರಗಳು ಮಾಯಾಗಿವೆ. ಈ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗಿದೆ ಎಂದು ರವಿಕುಮಾರ್ ದೂರಿದ್ದಾರೆ. ಕೆರೆ ಹಾಗೂ ಕಟ್ಟೆ ಸುತ್ತಮುತ್ತಲು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕಾದ ಗ್ರಾಪಂ ದಿವ್ಯ ಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕಳೆದ ೧೦ ದಿನಗಳಿಂದ ನಿರಂತರವಾಗಿ ರವಿಕುಮಾರ್ ಎಂಬ ವ್ಯಕ್ತಿ ಸರ್ಕಾರಿ ಜಾಗದಲ್ಲಿರುವ ಮರಗಳನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟವರು ಕ್ರಮ ವಹಿಸುತ್ತಿಲ್ಲ. ಗ್ರಾಮಕ್ಕೆ ಹೊಂದಿಕೊಂಡ ಕೆರೆ ಹಾಗೂ ಕಟ್ಟೆಯನ್ನು ಗ್ರಾಪಂ ವತಿಯಿಂದಲೇ ಕೆಲವು ತಿಂಗಳ ಹಿಂದೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಲುವೆ ನಿರ್ಮಾಣ, ಬದು ನಿರ್ಮಾಣ ಸೇರಿದಂತೆ ಮರಗಳನ್ನು ಸಂರಕ್ಷಣೆ ಮಾಡಲು ಕ್ರಮ ವಹಿಸಲಾಗಿತ್ತು. ಇದರಿಂದ ಬೇವಿನ ಮರ ಸೇರಿದಂತೆ ಇತರೇ ಕಾಡು ಜಾತಿಯ ಮರಗಳು ಸಂತೃಷ್ಟವಾಗಿ ಬೆಳೆದಿದ್ದವು. ಈ ಮರಗಳು ಬೆಳೆಯುತ್ತಿದ್ದಂತೆ ಇದರ ಮೇಲೆ ಕಣ್ಣಿಟ್ಟದ್ದ ರವಿಕುಮಾರ್ ಎಂಬ ವ್ಯಕ್ತಿ ಏಕಾಏಕಿ ಸರ್ಕಾರಿ ಜಾಗದಲ್ಲಿ ಮರ ಕಡಿದು ಮಾರಾಟ ಮಾಡಿರುವುದು ಘೋರ ಅಪರಾಧವಾಗಿದೆ.

ಈ ಸಂಬಂಧ ಆತನ ವಿರುದ್ದ ಜಿಲ್ಲಾಧಿಕಾರಿಗಳು, ಅರಣ್ಯ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸುವಂತೆ ಲಿಖಿತವಾಗಿ ದೂರು ನೀಡುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳ ಜೊತೆಗೂಡಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡುವುದಾಗಿ ಸಮಾಜ ಸೇವಕ ಮಾದಾಪುರ ರವಿಕುಮಾರ್ ಒತ್ತಾಯಿಸಿದ್ದಾರೆ.