ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಕಂಪ್ಯೂಟರ್ ತಂತ್ರಜ್ಞಾನ ಬೆಳೆದಂತೆ ಸಿ.ವಿ.ರಾಮನ್ ಅವರ ಪರಿಣಾಮದ ಸಂಶೋಧನೆಗಳು ಹೆಚ್ಚು ಹೆಚ್ಚು ಉಪಯೋಗವಾಗುತ್ತಿವೆ ಎಂದು ಡಾ.ಎಂ.ಆರ್. ಜರಕುಂಟಿ ಹೇಳಿದರು.ಬುಧವಾರ ಸ್ಥಳೀಯ ಎಸ್.ಆರ್. ಕಂಠಿ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಗೌರವ ಸಲ್ಲಿಸಿ ಮಾತನಾಡಿ, ಸರ್ ಸಿ.ವಿ. ರಾಮನ್ ಅವರು ವಿಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುವ ಮೂಲಕ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕಾರಣೀಕರ್ತರಾಗಿದ್ದಾರೆ, ಅವರು ಸಂಶೋಧಿಸಿದ ರಾಮನ್ ಎಫೆಕ್ಟ್ ವಿಶ್ವಕ್ಕೆ ಅದ್ಭುತ ಕೊಡುಗೆ, ರಾಮನ್ ಎಫೆಕ್ಟ್ ಕೇವಲ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಾತ್ರವಲ್ಲ. ಮನುಕುಲದ ಉದ್ಧಾರಕ್ಕೆ ಹೆಚ್ಚು ಸಹಕಾರಿ, ಲೇಸರ್ ಆವಿಷ್ಕಾರ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಬೆಳೆದಂತೆ ರಾಮನ್ ಎಫೆಕ್ಟ್ ಹಾಗೂ ಉಪಯೋಗ ಹೆಚ್ಚಾಗುತ್ತಿದೆ ಎಂದರು.
ರಾಮನ್ ಎಫೆಕ್ಟ್ ಆವಿಷ್ಕಾರ ಅನೇಕ ಕ್ಷೇತ್ರಗಳಲ್ಲಿ ಉಪಯೋಗವಾಗುತ್ತಿದೆ. ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ವಿಭಾಗದಲ್ಲಿ ಸರಕುಗಳ ಪರಿವೀಕ್ಷಣೆ ಮಾಡಲು ಇದು ಬಹಳ ಪ್ರಭಾವಶಾಲಿ ಉಪಕರಣವಾಗಿದೆ. ಜೀವ ರಾಸಾಯನಿಕ ಸಂಯುಕ್ತ ವಸ್ತುಗಳು, ಅಲರ್ಜಿಗೆ ಆಗಬಹುದಾದ ಹಾನಿ ಕಾರಕ ವಸ್ತುಗಳ ಬಗ್ಗೆ ತಿಳಿಯಲು ಉಪಯೋಗ ಆಗಿದೆ. ಪೊಲೀಸ್ ಇಲಾಖೆ ಬರವಣಿಗೆ ಪರೀಕ್ಷಿಸಲು ಸಹ ಬಳಸುತ್ತಿದೆ ಎಂದರು.ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಅನೀಲಕುಮಾರ ಪತ್ತಾರ ಮಾತನಾಡಿ, ದೇಶದ ಪ್ರಖ್ಯಾತ ವಿಜ್ಞಾನಿಯಾದ ಡಾ. ಸರ್. ಸಿ.ವಿ.ರಾಮನ್‌ರವರು 1928 ಫೆಬ್ರವರಿ 28ರಂದು ಅವರ ಸಂಶೋಧನೆಯಾದ ರಾಮನ್ ಎಫೆಕ್ಟ್ ಅನ್ನು ಲೋಕಾರ್ಪಣೆ ಮಾಡಿದ ದಿನ, ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ ಕೊಂಡಾಗ ಮೌಢ್ಯ ಹಾಗೂ ಅಂಧಕಾರ ದೂರ ಮಾಡಿ ಹೊಸ ಆಲೋಚನೆಗಳ ಕಡೆ ಗಮನ ಹರಿಸಲು ಸಾಧ್ಯ, ನಮ್ಮ ದೇಶದ ವಿಜ್ಞಾನಿಗಳು ನೀಡಿದ ಕೊಡುಗೆ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡಿದರೆ ಅದೇ ಅವರಿಗೆ ನೀಡುವ ಪ್ರೋತ್ಸಾಹ ಹಾಗೂ ಕತಜ್ಞತೆಯಾಗಲಿದೆ ಎಂದರು.
ಉಪನ್ಯಾಸಕರಾದ ಎ.ಹೆಚ್.ಹಿರೇಮಠ, ಡಾ.ಎಂ.ಎಚ್.ಜೋಗಿ, ಡಾ.ಎಂ.ಎನ್.ಪಾಟೀಲ, ಡಾ.ಲೋಕೇಶ ರಾಠೋಡ, ಅಜ್ಜಪ್ಪ ಕಡೂರ, ಡಾ.ಸುನೀಲ ಕುಸ್ತಿ ಇತರರು ಇದ್ದರು.