ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಶುಕ್ರವಾರ ಸೈಬರ್ ಜಾಗೃತಿ ಸೈಕಲ್ ಜಾಥಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಉಡುಪಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಶುಕ್ರವಾರ ಸೈಬರ್ ಜಾಗೃತಿ ಸೈಕಲ್ ಜಾಥಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಅವರು ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ಅಪರಿಚಿತ ವ್ಯಕ್ತಿಗಳಿಗೆ ಓಟಿಪಿ, ಪಾಸ್‌ವರ್ಡ್, ಪಿನ್ ಹಾಗೂ ಯಾವುದೇ ರೀತಿಯ ರಹಸ್ಯ ಕೋಡ್‌ಗಳನ್ನು ಹಂಚಿಕೊಳ್ಳಬಾರದು ಎಂದು ತಿಳಿಸಿದರು.
ನಂತರ ಟೈಗರ್ ಸರ್ಕಲ್‌ನಿಂದ ಕಡಿಯಾಳಿ ಮೂಲಕ ಉಡುಪಿಯ ಬೋರ್ಡ್ ಹೈಸ್ಕೂಲ್‌ವರೆಗೆ ಸೈಕಲ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಜಾಥಾದಲ್ಲಿ ಮಣಿಪಾಲ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್, ಸೈಬರ್ ಅಪರಾಧ ಠಾಣೆಯ ನಿರೀಕ್ಷಕ ನೀಲೇಶ್ ಜಿ. ಚವ್ಹಾಣ್, ಮಹಿಳಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಉಪನಿರೀಕ್ಷಕರು ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.