ಪೊಲೀಸರು ಸೈಬರ್ ವಂಚನೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ವಂಚನೆಗೆ ತುತ್ತಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರಜ್ಞಾವಂತರು, ವೈದ್ಯರು, ಟೆಕ್ಕಿಗಳು, ಶಿಕ್ಷಕರು, ಉದ್ಯಮಿಗಳು, ವ್ಯಾಪಾರಸ್ಥರು, ರೈಲ್ವೆ ನೌಕರರು, ಪ್ರಾಧ್ಯಾಪಕರು, ಬ್ಯಾಂಕ್ ಅಧಿಕಾರಿಗಳೇ ಹೆಚ್ಚಾಗಿ ವಂಚಕರ ಆಹಾರವಾಗುತ್ತಿದ್ದಾರೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಸೈಬರ್ ವಂಚನೆಗೆ ನಲುಗದ ನಗರ, ಜಿಲ್ಲೆಗಳೇ ಇಲ್ಲ. ಹಾಗೆಯೇ ಈ ವಂಚನೆಗೆ ಹು-ಧಾ ಮಹಾನಗರ ಕಮಿಷನರೇಟ್ ಹೊರತಾಗಿಲ್ಲ. 2025ರ ಒಂದೇ ವರ್ಷದಲ್ಲಿ 134 ಜನರು ಸೈಬರ್ ವಂಚನೆಗೆ ಗುರಿಯಾಗಿದ್ದು, ಒಟ್ಟು ₹17,84,29,860 ಹಣ ವಂಚಕರ ಮೋಸಕ್ಕೆ ತುತ್ತಾಗಿತ್ತು. ಇದರಲ್ಲಿ ₹3,15,80,000 ಹಣ ದೂರುದಾರರಿಗೆ ಮರಳಿಸಲಾಗಿದೆ. 19 ಜನ ಡಿಜಿಟಲ್ ಅರೆಸ್ಟ್ ಗಾಳಕ್ಕೆ ತುತ್ತಾಗಿದ್ದಾರೆ.
ವರ್ಷದ ಆರಂಭದ 3-4 ತಿಂಗಳಲ್ಲಿ ಸೈಬರ್ ವಂಚನೆಗಳ ಸಂಖ್ಯೆ 4-5 ರೊಳಗಿದ್ದರೆ ನಂತರದ ತಿಂಗಳುಗಳಲ್ಲಿ ಏರಿಕೆ ಕಂಡುಬಂದಿದೆ. ಮೇ ತಿಂಗಳಲ್ಲಿ 9, ಜೂನ್ 8, ಜುಲೈನಲ್ಲಿ 10 ಪ್ರಕರಣಗಳು ದಾಖಲಾದರೆ, ಆಗಸ್ಟ್ 20, ಸೆಪ್ಟೆಂಬರ್ 18, ಅಕ್ಟೋಬರ್‌ನಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿಪರ್ಯಾಸವೆಂದರೆ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ವಂಚಕರ ಜಾಲದ ಬಲೆಗೆ ಬೀಳುತ್ತಿದ್ದಾರೆ.ಪೊಲೀಸರು ಸೈಬರ್ ವಂಚನೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ವಂಚನೆಗೆ ತುತ್ತಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರಜ್ಞಾವಂತರು, ವೈದ್ಯರು, ಟೆಕ್ಕಿಗಳು, ಶಿಕ್ಷಕರು, ಉದ್ಯಮಿಗಳು, ವ್ಯಾಪಾರಸ್ಥರು, ರೈಲ್ವೆ ನೌಕರರು, ಪ್ರಾಧ್ಯಾಪಕರು, ಬ್ಯಾಂಕ್ ಅಧಿಕಾರಿಗಳೇ ಹೆಚ್ಚಾಗಿ ವಂಚಕರ ಆಹಾರವಾಗುತ್ತಿದ್ದಾರೆ.
ಹೇಗೆಲ್ಲ ವಂಚನೆ?ಡಿಜಿಟಲ್ ಅರೆಸ್ಟ್, ಪಾರ್ಟ್ ಟೈಮ್ ಜಾಬ್, ಉದ್ಯೋಗಾವಕಾಶ, ತ್ವರಿತ ಗತಿಯಲ್ಲಿ ಹಣ ದ್ವಿಗುಣ ಆಮಿಷ, ಹೂಡಿಕೆ, ಸರ್ಕಾರಿ ಯೋಜನೆಗಳ ಲಾಭ ನೆಪದಲ್ಲಿ ವಂಚಕರು ಲಕ್ಷಾಂತರ ರುಪಾಯಿ ದೋಚುತ್ತಿದ್ದಾರೆ. ಬಹುತೇಕ ಪ್ರಕರಣಗಳು ಹಣ ಹೂಡಿಕೆ ಹೆಸರಿನಲ್ಲಿ, ಕೆಲವು ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಲಾಗಿದೆ. ಬ್ಯಾಂಕಿಂಗ್, ಹಣಕಾಸು ವಹಿವಾಟು, ಆನ್‌ಲೈನ್ ಶಾಪಿಂಗ್, ಹೂಡಿಕೆಯಂತಹ ಆರ್ಥಿಕ ಚಟುವಟಿಕೆಗಳನ್ನು ಮೊಬೈಲ್ ಹಾಗೂ ಆನ್‌ಲೈನ್ ಬಳಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಸುಲಭವಾಗಿ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಸೈಬರ್ ವಂಚಕರು ಮೊದಲು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ವಾಟ್ಸ್ಆ್ಯಪ್‌ನಲ್ಲಿ ಪರಿಚಯವಾಗಿ ಬಳಿಕ ಟೆಲಿಗ್ರಾಂನ ಗುಂಪೊಂದರ ಲಿಂಕ್ ಕಳುಹಿಸಿ ವಂಚಿಸುತ್ತಿದ್ದಾರೆ.
ಸೈಬರ್ ವಂಚನೆಗೊಳಗಾದಾಗ 1930 ಸಂಖ್ಯೆ ಕರೆ ಮಾಡಬೇಕು ಎನ್ನುತ್ತಾರೆ ಪೊಲೀಸರು. ಆದರೂ ವಂಚನೆ ನಿರಂತರವಾಗಿದೆ.19 ಜನ ಡಿಜಿಟಲ್ ಅರೆಸ್ಟ್ ಬಲೆಗೆ
ಒಂದೇ ವರ್ಷದಲ್ಲಿ 19 ಜನರು ಡಿಜಿಟಲ್ ಅರೆಸ್ಟ್‌ಗೆ ತುತ್ತಾಗಿ ₹ 8 ಕೋಟಿಗೂ ಅಧಿಕ ಹಣ ಕಳೆದುಕೊಂಡಿರುವುದು ವರದಿಯಾಗಿದೆ. ಅಕ್ಟೋಬರ್‌ನಲ್ಲಿ ಹುಬ್ಬಳ್ಳಿಯ ಭವಾನಿ ನಗರದ ಎಸ್.ಎಸ್. ಪೂಜಾರ ಎಂಬುವರಿಗೆ ಮುಂಬೈ ಪೊಲೀಸ್ ಹೆಸರಲ್ಲಿ ವಾಟ್ಸ್‌ಆ್ಯಪ್ ಕರೆ ಮಾಡಿ ₹55.39 ಲಕ್ಷವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ವಂಚಿಸಲಾಗಿತ್ತು.ಇದೇ ತಿಂಗಳಲ್ಲಿ ಇಲ್ಲಿನ ಗೋಕುಲ ರಸ್ತೆಯ ಹಾಲಪ್ಪ ಸಾಬೋಜಿ ದಂಪತಿಗೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಆಧಾರ್ ಕಾರ್ಡ್ ಬಳಕೆಯಾಗಿದೆ ಎಂದು ಮುಂಬೈ ಪೊಲೀಸರ ಹೆಸರಲ್ಲಿ ಕರೆ ಮಾಡಿದ ವಂಚಕರು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿ ₹68.50 ಲಕ್ಷ ವಂಚಿಸಿದ್ದಾರೆ. ನವಂಬರ್‌ನಲ್ಲಿ ಕೇಶ್ವಾಪುರ ವಿನಯ ಕಾಲನಿಯ ನಾಗೇಶ ಶರ್ಮಾ ಎಂಬ ವೃದ್ಧನಿಗೆ ಮುಂಬೈ ಕೊಲಬಾ ಪೊಲೀಸ್ ಠಾಣೆ ಅಧಿಕಾರಿಗಳೆಂದು ನಂಬಿಸಿದ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿ ಆರ್‌ಟಿಜಿಎಸ್ ಮೂಲಕ ₹1.07 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಇದೇ ವರ್ಷ 64 ವರ್ಷದ ನಿವೃತ್ತ ನೌಕರರೊಬ್ಬರು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ₹5.2 ಲಕ್ಷ ಕಳೆದುಕೊಂಡಿದ್ದರು. ಹೀಗೆ ಹತ್ತಾರು ದಾರಿಗಳ ಮೂಲಕ ಅಮಾಯಕರನ್ನು ಈ ಡಿಜಿಟಲ್ ಅರೆಸ್ಟ್ ಗಾಳಕ್ಕೆ ಸಿಲುಕಿಸಿ ವಂಚಕರು ಹಣ ದೋಚಿರುವುದು ಬಯಲಿಗೆ ಬಂದಿದೆ.