ಶಿಮಂತೂರು: ಸೈಬರ್‌ ಕ್ರೈಂ ಮಾಹಿತಿ ಶಿಬಿರ

| Published : Jun 08 2024, 12:31 AM IST

ಸಾರಾಂಶ

ಸಾಮಾಜಿಕ ಮಾಧ್ಯಮ ಗುಂಪುಗಳು ಮತ್ತು ವೆಬ್‌ಸೈಟ್‌ಗಳಲ್ಲಿ. ಅಪರಿಚಿತರಿಂದ ಚಾಟ್ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಬೇಕು ಎಂದು ಮಾಹಿತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಇಂಟರ್ನೆಟ್ ನಮ್ಮ ಜೀವನದ ಎಲ್ಲ ಅಂಶಗಳ ಮೇಲೆ ಪ್ರಭಾವ ಬೀರುತ್ತಿದೆ. ಜೊತೆಗೆ ವ್ಯಾಪಕವಾದ ಬೆದರಿಕೆಗೆ ಗುರಿಯಾಗುವಂತೆ ಮಾಡುತ್ತದೆ. ಕಂಪ್ಯೂಟರ್‌ಗಳು, ಸರ್ವರ್‌ಗಳು, ಮೊಬೈಲ್ ಸಾಧನಗಳು, ಎಲೆಕ್ಟ್ರಾನಿಕ್ ಸಿಸ್ಟಂಗಳು, ನೆಟ್‌ವರ್ಕ್‌ಗಳು ಮತ್ತು ಡೇಟಾವನ್ನು ದುರುದ್ದೇಶಪೂರಿತ ದಾಳಿಯಿಂದ ರಕ್ಷಿಸುವ ಅಭ್ಯಾಸವೇ ಸೈಬರ್‌ ಸೆಕ್ಯುರಿಟಿ ಎಂದು ಮೂಲ್ಕಿ ಪೊಲೀಸ್‌ ಠಾಣೆಯ ಸಹಾಯಕ ಉಪ ನಿರೀಕ್ಷಕ ಸಂಜೀವ ಹೇಳಿದರು.

ಶಿಮಂತೂರಿನ ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ಹಾಗೂ ಮೂಲ್ಕಿ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ಶಿಮಂತೂರಿನ ಶ್ರೀ ಶಾರದ ಸೆಂಟ್ರಲ್ ಸ್ಕೂಲ್‌ನಲ್ಲಿ ಶಾಲಾ ಮಕ್ಕಳಿಗೆ ಸೈಬರ್ ಭದ್ರತೆಯ ಕುರಿತು ಜರುಗಿದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಸೈಬರ್‌ ಅಪರಾಧಗಳ ತಡೆಗಟ್ಟುವಿಕೆಯ ಮಾಹಿತಿಯನ್ನು ಪ್ರಸಾರ ಮಾಡುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಸೈಬರ್ ಸುರಕ್ಷತೆಗಾಗಿ ಪರಿಸರ ವ್ಯವಸ್ಥೆಯನ್ನು ರಚಿಸಲು ಮತ್ತು ಸೈಬರ್-ಅಪರಾಧಗಳನ್ನು ತಡೆಯಲು ಅನುಕೂಲವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ. ರಾವ್ ವಹಿಸಿದ್ದರು. ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸರಿಯಾದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡದಿದ್ದರೆ, ಪೋಸ್ಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮಗೆ ತಿಳಿಯದೆ ಇತರರು ವೀಕ್ಷಿಸಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಬಳಸಬಹುದು. ಸಾಮಾಜಿಕ ಮಾಧ್ಯಮ ಗುಂಪುಗಳು ಮತ್ತು ವೆಬ್‌ಸೈಟ್‌ಗಳಲ್ಲಿ. ಅಪರಿಚಿತರಿಂದ ಚಾಟ್ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೂಲ್ಕಿ ಪೊಲೀಸ್‌ ಠಾಣೆಯ ಉಪ ನಿರೀಕ್ಷಕ ಉಮೇಶ್, ಹೆಡ್‌ ಕಾನ್ಸ್‌ಟೇಬಲ್‌ ಸತೀಶ್, ಮಹಿಳಾ ಕಾನ್ಸ್‌ಟೇಬಲ್‌ ಸ್ವಾತಿ ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು. ವೀಣಾ ಸ್ವಾಗತಿಸಿದರು. ಶ್ರೀಲತಾ ವಂದಿಸಿದರು.