ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ

| Published : Aug 10 2025, 02:18 AM IST

ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಗಣ್ಯರು ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸುವ ಮೂಲಕ ಈ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ ಎಂದು ತುಮಕೂರಿನ ಪರಿಸರ ಪ್ರೇಮಿ ಮಹಾಲಿಂಗಯ್ಯ ಕುಶಾಲನಗರದಲ್ಲಿ ಹೇಳಿದರು.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಉಳಿವು ಮತ್ತು ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ ಕೈಗೊಂಡಿರುವ ಮಹಾಲಿಂಗಯ್ಯ ಮಾತನಾಡಿ, ನಾವು ಗಿಡ- ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ ದೇಶವನ್ನು ಹಸಿರಿನಿಂದ ಸಮೃದ್ಧಗೊಳಿಸಿ ಕಂಗೊಳಿಸುವುದು ಸೇರಿದಂತೆ ರಾಜ್ಯದಲ್ಲಿರುವ ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಬೈಸಿಕಲ್ ಜಾಥಾದ ಮೂಲಕ ರಾಜ್ಯಾದ್ಯಂತ ಸಂಚರಿಸುತ್ತಿರುವ ಮಹಾಲಿಂಗಯ್ಯ ಅವರು ಬುಧವಾರ ಬೆಳಗ್ಗೆ ಕೊಡಗು ಸಂಚಾರ ಪೂರೈಸಿ ಮೈಸೂರು ಜಿಲ್ಲೆಗೆ ತೆರಳುವ ಸಂದರ್ಭದಲ್ಲಿ ಕುಶಾಲನಗರದಲ್ಲಿ ಪ್ರವಾಸಿ ಮಂದಿರದ ಬಳಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಜತೆಗೆ ಪ್ರತಿ ಗ್ರಾಮ ಮತ್ತು ಊರುಗಳಲ್ಲಿಯೂ ಕೆರೆಗಳನ್ನು ಉಳಿಸಿ ಅಲ್ಲಿ ಹಸಿರು ಪರಿಸರ ನಿರ್ಮಿಸಿ ಪಕ್ಷಿ - ಸಂಕುಲಗಳ ಸಂರಕ್ಷಣೆಗೆ ಮನವಿ ಮಾಡಲಾಗುತ್ತಿದೆ. ಜಾಥಾದ ಸಂದರ್ಭದಲ್ಲಿ ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಬಡ ಮಕ್ಕಳು ಹೆಚ್ಚಾಗಿ ಕಲಿಯುವ ಸರ್ಕಾರಿ ಶಾಲೆಗಳನ್ನು ಉಳಿಸಿ ಅವುಗಳ ಅಭಿವೃದ್ಧಿ ಮತ್ತು ಬಲವರ್ಧನೆಗೆ ಒತ್ತಾಯಿಸಿ ಮನವಿ ಮಾಡಲಾಗುತ್ತಿದೆ ಎಂದು ಮಹಾಲಿಂಗ ತಿಳಿಸಿದರು.

ಪರಿಸರ ಪ್ರೇಮಿ ಮಹಾಲಿಂಗಯ್ಯ ಅವರ ಬೈಸಿಕಲ್ ಜಾಥಾದ ಪರಿಸರ ಕಾಳಜಿ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟ

ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಪರಿಸರ ಪ್ರೇಮಿ ಮಹಾಲಿಂಗಯ್ಯ ಅವರ ಪರಿಸರ ಕಾಳಜಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮೆಚ್ಚುವಂತದ್ದು, ಇಂತಹ ಸಾಮಾಜಿಕ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಜಾಥಾವು ಶ್ಲಾಘನೀಯ:

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರ ಪ್ರೇಮಿ ಮಹಾಲಿಂಗಯ್ಯ ಅವರು ಪರಿಸರ ಸಂರಕ್ಷಣೆ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಮ್ಮಿಕೊಂಡಿರುವ ಬೈಸಿಕಲ್ ಜಾಥಾವು ಶ್ಲಾಘನೀಯವಾದುದು ಎಂದರು.

ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉತ್ತಮ ಉದ್ದೇಶದೊಂದಿಗೆ ಕೈಗೊಂಡಿರುವ ಬೈಸಿಕಲ್ ಜಾಥಾ ಯಶಸ್ವಿಯಾಗಲಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ನಾಗೇಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇಂದ್ರ ಶುಭ ಕೋರಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಅಳಿಲು ಸೇವಾ ತಂಡದ ಪ್ರಮುಖರಾದ ಕೆ.ಜಿ.ಮನು, ಕುಮಾರ್ ಇತರರು ಇದ್ದರು.

*ಅಪರ ಜಿಲ್ಲಾಧಿಕಾರಿಗೆ ಮನವಿ*

ಮಡಿಕೇರಿಯಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರನ್ನು ಭೇಟಿ ಮಾಡಿ ಕೆರೆಗಳ ಸಂರಕ್ಷಣೆ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೆ ಮಹಾಲಿಂಗಯ್ಯ ಮನವಿ ಮಾಡಿದ್ದಾರೆ.

ತುಮಕೂರಿನಿಂದ ಮೂರು ತಿಂಗಳ ಹಿಂದೆ ಆರಂಭವಾಗಿರುವ ಇವರ ಸೈಕಲ್ ಯಾತ್ರೆಯು ಇಂದಿಗೆ 100 ದಿನಗಳಾಗಿದ್ದು,

ಈಗಾಗಲೇ 5200 ಕಿಲೋ ಮೀಟರ್ ಪ್ರವಾಸ ಪೂರ್ಣಗೊಂಡಿದೆ.

ತುಮಕೂರಿನಿಂದ ಸೈಕಲ್ ಜಾಥಾ ಆರಂಭಿಸಿ ಈಗಾಗಲೇ ರಾಜ್ಯದ 23 ಜಿಲ್ಲೆಗಳಲ್ಲಿ ಬೈಸಿಕಲ್ ಜಾಥಾ ನಡೆಸಲಾಗಿದೆ. ಇದೀಗ ಕೊಡಗಿನಿಂದ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಜಾಥಾ ಕೈಗೊಂಡು ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ವಿಧಾನ ಸೌಧ ಬಳಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶವಿದೆ.

ಆ. 15 ರ ನಂತರ ಉಳಿದ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜಾಥಾ ಕೈಗೊಳ್ಳಲಾಗುವುದು ಎಂದು ಮಹಾಲಿಂಗಯ್ಯ ತಿಳಿಸಿದರು.