ಸಾರಾಂಶ
ದೇಹದ ಸದೃಢತೆ ಕಾಪಾಡಿಕೊಳ್ಳಲು, ಬಜ್ಜು ನಿವಾರಿಸಲು ನಿತ್ಯ ಸೈಕ್ಲಿಂಗ್‌ನಷ್ಟು ಆರೋಗ್ಯಕರವಾದ ವ್ಯಾಯಾಮ ಮತ್ತೊಂದಿಲ್ಲ.
ಕನ್ನಡಪ್ರಭ ವಾರ್ತೆ ಸುರಪುರ
ನಗರದ ಪ್ರಭು ಕಾಲೇಜು ಮೈದಾನದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ನಿಮಿತ್ತ ತಾಲೂಕು ಪಂಚಾಯ್ತಿ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ದೇಹದ ಅಂಗಾಂಗಳ ಬೆಳವಣಿಗೆಯಲ್ಲಿ ಸೈಕ್ಲಿಂಗ್ ಉತ್ತಮವಾಗಿದೆ. ದೇಹದ ಸದೃಢತೆ ಕಾಪಾಡಿಕೊಳ್ಳಲು, ಬಜ್ಜು ನಿವಾರಿಸಲು ನಿತ್ಯ ಸೈಕ್ಲಿಂಗ್‌ನಷ್ಟು ಆರೋಗ್ಯಕರವಾದ ವ್ಯಾಯಾಮ ಮತ್ತೊಂದಿಲ್ಲ. ಬೈಕ್‌ಗಿಂತಲೂ ನಮ್ಮ ಹಿರಿಯರು ಸೈಕಲ್ ಹೆಚ್ಚಾಗಿ ಬಳಸುತ್ತಿದ್ದರು. ಅವರಿಗೆ ಕಾಯಿಲೆಗಳು ತುಂಬ ಕಡಿಮೆಯಾಗಿದ್ದವು. ಸವಾರಿಯಿಂದ ಮಾನಸಿಕ ಒತ್ತಡ ದೂರವಾಗುತ್ತದೆ. ಸೈಕ್ಲಿಸ್ಟ್ಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕ್ರೀಡೆಯ ಬೆಳವಣಿಗೆಗೆ ಸಹಕರಿಸಬೇಕಾಗಿದೆ ಎಂದರು.
ಸಂವಿಧಾನ ಜಾಗೃತಿ ಜಾಥಾ ನಿಮಿತ್ತವಾಗಿ ರಾಜ್ಯಮಟ್ಟದ ಬಿಲ್ಲುಗಾರಿಕೆ ಮತ್ತು ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೀಡಾಪಟುಗಳು ಪಾಲ್ಗೊಂಡು ಉತ್ತಮ ಪೈಪೋಟಿ ನೀಡಿದ್ದಾರೆ ಎಂದು ತಿಳಿಸಿದರು.ತಹಸೀಲ್ದಾರ್ ಕೆ. ವಿಜಯಕುಮಾರ ಮಾತನಾಡಿ, ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ವಿಜಯಪುರ, ಬಾಗಲಕೋಟೆ, ಗದಗ ಸೇರಿ ಇನ್ನಿತರ ಜಿಲ್ಲೆಗಳಿಂದ 37 ಬಾಲಕರು, 29 ಬಾಲಕಿಯರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಗ್ರೇಡ್-1 ಡಾ.ಶ್ರುತಿ ಎಂ., ಯುವ ಕ್ರೀಡಾ ಇಲಾಖೆಯ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ ದೈಹಿಕ ಶಿಕ್ಷಕರು ಸೇರಿದಂತೆ ಇತರರಿದ್ದರು.