ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಸೈಕ್ಲಿಸ್ಟ್ಗಳ ತವರೂರು ವಿಜಯಪುರ ಜಿಲ್ಲೆಯಲ್ಲಿ ಹೋರಾಟಗಳ ಬಳಿಕ ಶುರುವಾಗಿದ್ದ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದೆ. ರೋಡ್ ಸೈಕ್ಲಿಂಗ್‌ನಲ್ಲಿ ಹಿರೋ ಆಗಿರುವ ಇಲ್ಲಿಯ ಸೈಕ್ಲಿಸ್ಟ್‌ಗಳು ಪ್ರ್ಯಾಕ್ಟೀಸ್ ಮಾಡಲು ವೆಲೊಡ್ರೋಮ್ ಇಲ್ಲದ್ದರಿಂದ ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ಝೀರೋ ಆಗಿದ್ದಾರೆ.
ವಿಜಯಪುರ ಹೊರವಲಯದ ಭೂತನಾಳ ಬಳಿಯಲ್ಲಿ 8.10 ಎಕರೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ಮಿಸುತ್ತಿರುವ ಸೈಕ್ಲಿಂಗ್ ವೆಲೋಡ್ರೊಮ್ ಆಗೊಂದಿಷ್ಟು, ಈಗೊಂದಿಷ್ಟು ಎಂಬಂತೆ ಆಮೆಗತಿಯಲ್ಲಿಯೇ ಸಾಗುತ್ತಿದೆ. ಈ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಸ್ಥಳೀಯ ಸೈಕ್ಲಿಸ್ಟ್‌ಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮೊದಲು ₹4.23 ಕೋಟಿಗೆ ಟೆಂಡರ್ ಆಗಿದ್ದ ಕಾಮಗಾರಿ, ಗುತ್ತಿಗೆದಾರರು ಕೈ ಕೊಟ್ಟಿದ್ದರಿಂದ ಇದೀಗ ₹7.32 ಕೋಟಿಗೆ ಬಂದು ನಿಂತಿದೆ. ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೈಕಲ್‌ಗಳು ಓಡಬೇಕಿದ್ದ ಜಾಗದಲ್ಲಿ ವೇಲೊಡ್ರೋಮ್ ಗಿಡಗಂಟಿಗಳು ಬೆಳೆದುಕೊಂಡಿವೆ.ಬಿಜೆಪಿ ಸರ್ಕಾರದಲ್ಲಿ 2009ರಲ್ಲಿ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ ಅವರು ಮೊದಲು ಭೂಮಿಪೂಜೆ ಮಾಡಿದ್ದರು. ನಂತರದಲ್ಲಿ 2012ರವರೆಗೆ ರಾಜ್ಯಮಟ್ಟದಲ್ಲಿ ನಾಲ್ಕು ಬಾರಿ ಟೆಂಡರ್ ಕರೆದರೂ ಯಾರೊಬ್ಬರೂ ಪರಿಣಿತ ಗುತ್ತಿಗೆದಾರರು ಇದರ ನಿರ್ಮಾಣಕ್ಕೆ ಆಸಕ್ತಿ ತೋರಲಿಲ್ಲ. ಬಳಿಕ ಲ್ಯಾಂಡ್ ಆರ್ಮಿಗೆ ಕೆಲಸ ವಹಿಸಲಾಯಿತು. ಆದರೆ, ಅವರೂ ತಾಂತ್ರಿಕ ಸಮಸ್ಯೆಯಿಂದ ಭೂಮಿಪೂಜೆ ಮಾಡಿ ಕೈಬಿಟ್ಟರು. ಬಳಿಕ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಗಿನ ಕ್ರೀಡಾ ಸಚಿವ ಅಭಯಚಂದ್ರ ಜೈನ್ ವೆಲೊಡ್ರೋಮ್ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲದೇ, 5ನೇ ಬಾರಿ ಟೆಂಡರ್ ಕರೆದರೂ ಅರ್ಹರು ಯಾರೂ ಅರ್ಜಿಯನ್ನೇ ಹಾಕಲಿಲ್ಲ. ಬಳಿಕ, 2015ರಲ್ಲಿ ದಾವಣಗೆರೆಯ ಮಾರುತಿ ಕನ್‌ಸ್ಟ್ರಕ್ಷನ್ ಎಂಬುವವರಿಗೆ ನೇರಗುತ್ತಿಗೆ ಮೂಲಕ ಕಾಮಗಾರಿ ನೀಡಲಾಯಿತು. ಆ ವೇಳೆ ಕೇವಲ 3 ವರ್ಷಗಳಲ್ಲಿ ಕಾಮಗಾರಿ ಮುಗಿಸಬೇಕು ಎಂದು ಷರತ್ತು ಕೂಡ ವಿಧಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಆ ಕಾಮಗಾರಿಯೂ ನಿಧಾನವಾಯಿತು.
ಪೂರ್ಣಗೊಳ್ಳುತ್ತಾ ಕೊನೆಯ ಹಂತದ ಕಾಮಗಾರಿ...?:ವೆಲೊಡ್ರೋಮ್‌ನಲ್ಲಿ ಕೊನೆಯ ಹಂತದ ಕಾಮಗಾರಿ ನಡೆಯುತ್ತಿದ್ದು, ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಇದರಲ್ಲೂ ಪೆವಿಲಿಯನ್ (ಪ್ರೇಕ್ಷಕರಿಗೆ ಗ್ಯಾಲರಿ) ಆಗಬೇಕಿದ್ದು, ಸೈಕ್ಲಿಂಗ್ ಫೆಡರೇಷನ್‌ನಿಂದ ಅಂತಿಮ ಅನುಮೋದನೆ ಪಡೆಯಬೇಕಿದೆ. ಅಂದಾಗ ಮಾತ್ರ ಇಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸಬಹುದು. ಇದು ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಸುಮಾರು 150ಕ್ಕೂ ಅಧಿಕ ಸೈಕ್ಲಿಸ್ಟ್‌ಗಳಿಗೆ ಪ್ರ್ಯಾಕ್ಟೀಸ್ ಮಾಡಲು ಸಹಕಾರಿಯಾಗಲಿದೆ. ಈ ಮೂಲಕ ಒಲಿಂಪಿಕ್‌ನಲ್ಲಿ ಸರಳವಾಗಿ ಜಯಭೇರಿ ಬಾರಿಸಿ, ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಬಹುದಾಗಿದೆ. ಇನ್ನು ರಾಜ್ಯದಲ್ಲಿ ಒಟ್ಟು 300ಕ್ಕೂ ಅಧಿಕ ಜನ ಸೈಕ್ಲಿಸ್ಟ್‌ಗಳಿರುವುದರಿಂದ ಅವರಿಗೂ ಅನುಕೂಲವಾಗಲಿದೆ.
ರೋಡ್ ಸೈಕ್ಲಿಂಗ್ ಕಿಂಗ್ನಮ್ಮ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳು ಮೊದಲಿನಿಂದಲೂ ರೋಡ್ ಸೈಕ್ಲಿಂಗ್‌ನಲ್ಲಿ ಕಿಂಗ್ ಆಗಿದ್ದಾರೆ. ಹೀಗಾಗಿ ಇವರಿಗೆ ಭೂತನಾಳ ಕೆರೆ ಸುತ್ತಲಿನ ರಸ್ತೆ ಹಾಗೂ ಅದರ ಪಕ್ಕದ ರಸ್ತೆ, ಪಂಡರಾಫುರದ ಹಳೆ ರಸ್ತೆ, ಬರಟಗಿ ರಸ್ತೆ, ಇವುಗಳಲ್ಲಿ ಯಾವುದಾದರೂ ಒಂದನ್ನು ಬೆಳಗ್ಗೆ 6 ರಿಂದ 8.30ರ ವರೆಗೆ ಜೀರೋ ಟ್ರಾಫಿಕ್ ಮಾಡಿದರೆ ಸಾಕು ಸೈಕ್ಲಿಸ್ಟ್‌ಗಳಿಗೆ ಹೆಚ್ಚಿನ ಅನುಕೂಲ ಮಾಡಿದಂತಾಗಲಿದೆ. ಸೈಕ್ಲಿಸ್ಟ್‌ಗಳು ಕೂಡ ಇದನ್ನೇ ಬೇಡಿಕೊಳ್ಳುತ್ತಿದ್ದಾರೆ.
------------ಕೋಟ್
ನಾನು ಸೈಕ್ಲಿಸ್ಟ್ ಇದ್ದಾಗಿನಿಂದ ವೆಲೊಡ್ರೋಮ್ ಪ್ರ್ಯಾಕ್ಟೀಸ್ ಮಾಡಬೇಕು ಎಂದು ಕನಸು ಕಂಡಿದ್ದೆ. ದಶಕದಿಂದ ಚಾತಕ ಪಕ್ಷಿಯಂತೆ ವೆಲೊಡ್ರೋಮ್ ಕಾಯುವುದೇ ಆಗಿದೆ. ಇದುವರೆಗೂ ಅದು ಸಾಧ್ಯವಾಗಿಲ್ಲ. ಇದರಿಂದಾಗಿ ಅದೆಷ್ಟೋ ಕ್ರೀಡಾಪಟುಗಳ ಕನಸು ಭಗ್ನವಾಗಿದೆ. ರೋಡ್ ಸೈಕ್ಲಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ನಾವು ಟ್ರ್ಯಾಕ್ ಸೈಕ್ಲಿಂಗ್ ಬಂದಾಗ ಕೊನೆಗೆ ಹೋಗುವಂತಾಗಿದೆ. ಈಗಲಾದರೂ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು.- ರಾಜು ಬಿರಾದಾರ, ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ
------------ಈಗಾಗಲೇ ಶೇ.95ರಷ್ಟು ಮುಕ್ತಾಯವಾಗಿರುವ ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿಯಲ್ಲಿ ಟ್ರ್ಯಾಕ್ ಸಮತಟ್ಟುಗೊಳಿಸುವುದು ಹಾಗೂ ಕೆಲವುಕಡೆ ಪೇಂಟಿಂಗ್ ಕಾರ್ಯ ಬಾಕಿಯಿದೆ. ಫೆಬ್ರುವರಿ ತಿಂಗಳ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ವಾರದ ಕಾಲಾವಧಿಯಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.
- ಟಿ.ಭೂಬಾಲನ್, ವಿಜಯಪುರ ಡಿಸಿ