ದೈಹಿಕ ಚಟುವಟಿಕೆಗಳನ್ನು ದೈನಂದಿನ ಜೀವನದ ಭಾಗವಾಗಿಸುವುದು ಇದರ ಉದ್ದೇಶವಾಗಿದೆ. ಆಸಕ್ತರು ಸೈಕ್ಲೋಥಾನ್ ಅಥವಾ ವಾಕಥಾನ್ನಲ್ಲಿ ಯಾವುದಾದರೂ ಒಂದರಲ್ಲಿ ಭಾಗವಹಿಸಬಹುದು.
ಹುಬ್ಬಳ್ಳಿ:
ನಗರದಲ್ಲಿ ಅ. 25ರಂದು ಐದು ಕಿ.ಮೀ. ಸೈಕ್ಲೋಥಾನ್ ಮತ್ತು ವಾಕಥಾನ್ ಆಯೋಜಿಸಲಾಗಿದೆ ಎಂದು ಫಿಟ್ ಇಂಡಿಯಾ ಚಾಂಪಿಯನ್, ನಟಿ ರಾಗಿಣಿ ದ್ವಿವೇದಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರದ ಫಿಟ್ ಇಂಡಿಯಾ ಮೂವ್ಮೆಂಟ್ ಅಡಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜೆನಕ್ಸ್ಟ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಶಾ ಮುಕ್ತ ಭಾರತ ಅಭಿಯಾನ, ಹುಬ್ಬಳ್ಳಿ ಬೈಸಿಕಲ್ ಕ್ಲಬ್, ಹುಬ್ಬಳ್ಳಿ ಫಿಟ್ನೆಸ್ ಫೌಂಡೇಶನ್, ಅಬ್ಸೆಷನ್ ಕ್ಲಬ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಂದು ಬೆಳಗ್ಗೆ 6.30ಕ್ಕೆ ಸೈಕ್ಲೋಥಾನ್ ಹಾಗೂ 6.50ಕ್ಕೆ ವಾಕಥಾನ್ ಆರಂಭವಾಗಲಿವೆ. ತೋಳನಕೆರೆ ವೃತ್ತದಿಂದ ಆರಂಭವಾಗುವ ಎರಡೂ ಕಾರ್ಯಕ್ರಮಗಳು ವಿದ್ಯಾನಗರದ ಓಕ್ಸ್ ಹೋಟೆಲ್ ವರೆಗೆ ಸಾಗಿ ಮರಳಿ ತೋಳನಕೆರೆ ವೃತ್ತಕ್ಕೆ ತಲುಪಲಿವೆ ಎಂದು ಹೇಳಿದರು.ದೈಹಿಕ ಚಟುವಟಿಕೆಗಳನ್ನು ದೈನಂದಿನ ಜೀವನದ ಭಾಗವಾಗಿಸುವುದು ಇದರ ಉದ್ದೇಶವಾಗಿದೆ. ಆಸಕ್ತರು ಸೈಕ್ಲೋಥಾನ್ ಅಥವಾ ವಾಕಥಾನ್ನಲ್ಲಿ ಯಾವುದಾದರೂ ಒಂದರಲ್ಲಿ ಭಾಗವಹಿಸಬಹುದು. ಪಾಲ್ಗೊಳ್ಳುವವರಿಗೆ ಟಿ-ಶರ್ಟ್ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 83108 44241, 80502 10433 ಸಂಪರ್ಕಿಸಬಹುದು ಎಂದರು.
ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸದಸ್ಯ ಶಿವಾನಂದ ದಂಡಾವತಿಮಠ ಮಾತನಾಡಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, 3 ರಿಂದ 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಫಿಟ್ ಇಂಡಿಯಾ ಚಾಂಪಿಯನ್ ರಾಗಿಣಿ ದ್ವಿವೇದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜತೆಗೆ "ಸಂಡೇಸ್ ಆನ್ ಸೈಕಲ್ "ನ ಹುಬ್ಬಳ್ಳಿ ಆವೃತ್ತಿಯ ಸೈಕ್ಲಿಂಗ್ ಉತ್ಸಾಹಿಗಳು, ನಡಿಗೆ ಗುಂಪುಗಳು, ವಿದ್ಯಾರ್ಥಿಗಳು, ಕುಟುಂಬಗಳು ಮತ್ತು ಸಾರ್ವಜನಿಕರನ್ನು ಆರೋಗ್ಯ ಮತ್ತು ಯೋಗಕ್ಷೇಮದ ಸಾಮೂಹಿಕ ಆಚರಣೆಯಲ್ಲಿ ಒಗ್ಗೂಡಿಸುವ ಗುರಿ ಹೊಂದಲಾಗಿದೆ ಎಂದರು.ಇದೇ ವೇಳೆ ನಟಿ ರಾಗಿಣಿ ದ್ವಿವೇದಿ ಸೈಕ್ಲೋಥಾನ್, ವಾಕ್ಥಾನ್ನ ಫೋಸ್ಟರ್ ಬಿಡುಗಡೆಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಅರುಣ ಯಳಮಲಿ, ಉಜ್ವಲ್ ಸೇರಿದಂತೆ ಹಲವರಿದ್ದರು.