ಸಾರಾಂಶ
ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಸಿಜೆಂಟಾ ಕಂಪನಿ ಹೆಸರಿನ ಕಳಪೆ ಮುಸುಕಿನ ಜೋಳದ ಬೀಜ ಬಿತ್ತನೆ ಮಾಡಿ ಬೆಳೆ ಬರದೇ ಕೈಸುಟ್ಟುಕೊಂಡ ರೈತರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ತಾಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರಾದ ಸೂರ್ಯ ಕುಮಾರ್, ವಿರೂಪಾಕ್ಷ, ಮಲ್ಲಪ್ಪ ಎಂಬುವರು ಸಿಜೆಂಟಾ ಕಂಪನಿಯ ಕಳಪೆ ಮುಸುಕಿನ ಜೋಳದ ಬೀಜ ಬಿತ್ತಿ ಬೆಳೆ ಬೆಳೆಯದೆ ನಷ್ಟ ಅನುಭವಿಸಿರುವ ಕುರಿತು ರೈತರು ಅಧಿಕಾರಿಗಳ ಗಮನಕ್ಕೆ ತಂದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಸಿಜೆಂಟಾ ಕಂಪನಿ ಹೆಸರಿನ ಕಳಪೆ ಮುಸುಕಿನ ಜೋಳದ ಬೀಜ ಬಿತ್ತನೆ ಮಾಡಿ ಬೆಳೆ ಬರದೇ ಕೈಸುಟ್ಟುಕೊಂಡ ರೈತರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ತಾಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕವಿತಾ ಅವರು ಸಿಜೆಂಟಾ ಕಂಪನಿಯ ಬಸವರಾಜು, ಮೋಹನ್ ಅವರನ್ನು ಸ್ಥಳಕ್ಕೆ ಕರೆಸಿ ಬೆಳೆ ವೀಕ್ಷಿಸಿದರು. ರೈತರಾದ ಸೂರ್ಯ ಕುಮಾರ್, ವಿರೂಪಾಕ್ಷ, ಮಲ್ಲಪ್ಪ ಎಂಬುವರು ಸಿಜೆಂಟಾ ಕಂಪನಿಯ ಕಳಪೆ ಮುಸುಕಿನ ಜೋಳದ ಬೀಜ ಬಿತ್ತಿ ಬೆಳೆ ಬೆಳೆಯದೆ ನಷ್ಟ ಅನುಭವಿಸಿರುವ ಕುರಿತು ರೈತರು ಅಧಿಕಾರಿಗಳ ಗಮನಕ್ಕೆ ತಂದರು.
ರೈತ ಸೂರ್ಯಕುಮಾರ್ ಮಾತನಾಡಿ, ಸಿಜೆಂಟಾ ಕಂಪನಿ ಮುಸುಕಿನ ಜೋಳದ ಬೀಜ ಖರೀದಿಸಿ ರೈತರು ಎಂಟು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ ಎರಡು ತಿಂಗಳಾದರೂ ಬೆಳೆ ಬೆಳವಣಿಗೆ ಕಂಡಿಲ್ಲ. ಇದೇ ಸಮಯದಲ್ಲಿ ಪಕ್ಕದ ಬೇರೆ ಜಮೀನಿಗೆ ಹೈಬ್ರೀಡ್ ತಳಿ ಬಿತ್ತಿದ ಮುಸುಕಿನ ಜೋಳದ ಬೆಳೆ ಹುಲುಸಾಗಿ ಬೆಳೆದಿದೆ. ಆದರೆ ಸಿಜೆಂಟಾ ಕಂಪನಿಯ ಕಳಪೆ ಬೀಜ ನೀಡಿದೆ. ಬೀಜ ಖರೀದಿಸಿ ಬಿತ್ತನೆ ಮಾಡಿದ ಬೆಳೆ ಬೆಳವಣಿಗೆ ಕಾಣದೇ ರೈತರಿಗೆ ಸಿಜೆಂಟಾ ಕಂಪನಿ ಪಂಗನಾಮ ಹಾಕಿದೆ. ಬೆಳೆ ಇಲ್ಲದೆ ಅಪಾರ ನಷ್ಟ ಅನುಭವಿಸುವಂತಾಗಿದೆ. ಕಂಪನಿಯಿಂದ ಮೋಸಕ್ಕೊಳಗಾದ ರೈತರಿಗೆ ಬೆಳೆ ನಷ್ಟ ಒದಗಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ಬೆಳೆ ಬೆಳವಣಿಗೆಗೆ ಹವಾಮಾನದ ವಾತಾವರಣ ಪರಿಣಾಮ ಬೀರಿಲ್ಲ. ಕಳಪೆ ಸಿಜೆಂಟಾ ಕಂಪನಿ ಬೀಜ ಖರೀದಿಸಿ ಬಿತ್ತನೆ ಮಾಡಿ ಬೆಳೆ ಕಳೆದುಕೊಂಡು ಕಣ್ಣೀರು ಇಡುವಂತಾಗಿದೆ. ಬೆಳೆಗಾಗಿ ಸಾಕಷ್ಟು ಹಣ ಖರ್ಚು ಮಾಡಿಕೊಂಡು ದಿಕ್ಕು ತೋಚದಾಗಿದೆ. ಕಂಪನಿಯೇ ಬೆಳೆ ನಷ್ಟ ಭರಿಸಬೇಕು ಎಂದು ರೈತರಾದ ಮಲ್ಲಪ್ಪ, ವಿರೂಪಾಕ್ಷ ಅವರು ಅಳಲು ತೋಡಿಕೊಂಡರು.ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಕವಿತಾ ಅವರು ರೈತರ ಸಮಸ್ಯೆ ಆಲಿಸಿ, ಬೆಳೆ ಹಾಳಾಗಿರುವ ಕುರಿತು ಸ್ಥಳಕ್ಕೆ ಕೃಷಿ ವಿಜ್ಞಾನಿಗಳನ್ನು ಕರೆಸಿ ಪರಿಶೀಲನೆ ನಡೆಸುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಸಿಜೆಂಟಾ ಕಂಪನಿ ಬೆಳೆ ನಷ್ಟದ ಪರಿಹಾರ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ರೈತರು ಎಚ್ಚರಿಕೆ ನೀಡಿದರು.