ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಆಕ್ಸಿಜನ್ ಹಾಗೂ ನೈಟ್ರೋಸಿಲ್ ಸಿಲಿಂಡರ್‌ಗಳು ಮಂಗಳವಾರ ಮುಂಜಾನೆ ಸ್ಫೋಟಗೊಂಡಿದ್ದರಿಂದ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಓರ್ವ ವೈದ್ಯಕೀಯ ವಿದ್ಯಾರ್ಥಿನಿಯ ಸಮಯಪ್ರಜ್ಞೆಯಿಂದಾಗಿ ಭಾರೀ ದುರಂತವೊಂದು ತಪ್ಪಿದಂತಾಗಿದೆ.ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ 3ನೇ ಅಂತಸ್ತಿನ ಇಎನ್‌ಟಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಮಂಗಳವಾರ ಬೆಳಗ್ಗೆ 8.40ರ ವೇಳೆ ಅರಿವಳಿಕೆ ಯಂತ್ರದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಅದೇ ಕೊಠಡಿಯಲ್ಲಿ ಕರ್ತವ್ಯದ ಮೇಲಿದ್ದ ಮೊದಲ ವರ್ಷದ ವೈದ್ಯಕೀಯ ಪಿಜಿ ವಿದ್ಯಾರ್ಥಿನಿ ಡಾ.ಅಕ್ಷಿತಾ ಸೇರಿದಂತೆ ಇತರರು ಅಲ್ಲಿನ ಸ್ಥಿತಿಯನ್ನು ಗಮನಿಸಿ, ತಕ್ಷಣವೇ ಹೊರಗೆ ಓಡಿಹೋಗಿದ್ದಲ್ಲದೇ, ಅಲ್ಲಿದ್ದವರನ್ನೆಲ್ಲಾ ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದಾರೆ.
ಬೆಂಕಿ ಇಡೀ ಕೊಠಡಿಯನ್ನು ಆವರಿಸಿ, ಕೆನ್ನಾಲಿಗೆ ಚಾಚಿದೆ. ಆಕ್ಸಿಜನ್ ಮತ್ತು ನೈಟ್ರೋಸಿಲ್ ಸಿಲಿಂಡರ್‌ಗಳು ಭಾರಿ ಸದ್ದಿನೊಂದಿಗೆ ಸ್ಫೋಟಗೊಂಡು, ಮತ್ತಷ್ಟು ಬೆಂಕಿ ವ್ಯಾಪಿಸುವಂತೆ ಮಾಡಿತು. ಇದರಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ, ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ. ಆಪರೇಷನ್ ಕೊಠಡಿ ಸೇರಿದಂತೆ ಅಕ್ಕಪಕ್ಕದ ಕೊಠಡಿಗಳಿಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದರಿಂದ ಆಸ್ಪತ್ರೆಯ ಮೂರನೇ ಮಹಡಿ ಬೆಂಕಿ, ದಟ್ಟ ಹೊಗೆಯಿಂದ ಆವರಿಸಿಕೊಂಡಿತು. ಯಾವಾಗ ಏನು ಸ್ಫೋಟಿಸುತ್ತದೋ, ಏನಾಗುತ್ತದೋ ಏನೋ ಎಂಬ ಆತಂಕದಲ್ಲಿ ಜನರಿದ್ದರು.ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿ, ಜಿಲ್ಲಾಸ್ಪತ್ರೆಯ 3ನೇ ಮಹಡಿಯಲ್ಲಿದ್ದ ಶಸ್ತ್ರಚಿಕಿತ್ಸಾ ಕೊಠಡಿ ಇತರೆ ಕೊಠಡಿಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯಲ್ಲಿ ಆಪರೇಷನ್ ಕೊಠಡಿಯಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಹಾಗೂ ನೈಟ್ರೋಸಿಲ್ ಸಿಲಿಂಡರ್‌ಗಳು ಸ್ಫೋಟವಾಗಿದ್ದು, ಸಿಲಿಂಡರ್‌ಗಳ ಸ್ಫೋಟದ ತೀವ್ರತೆಗೆ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಸುತ್ತಮುತ್ತಲಿನ ಕೊಠಡಿಗಳು, ಕಟ್ಟಡದ ಕೆಲ ಭಾಗ ಕಂಪಿಸಿದೆ ಎಂದು ಆಸ್ಪತ್ರೆಯಲ್ಲಿದ್ದ ಜನರು ಪ್ರತಿಕ್ರಿಯಿಸಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ಹರಸಾಹಸ ಮಾಡಿ, ಬೆಂಕಿಯನ್ನು ನಂದಿಸುವಲ್ಲಿ, ವಾತಾವರಣವನ್ನು ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಯಿತು. ಘಟನೆಯಿಂದಾಗಿ ಇಡೀ ಆಸ್ಪತ್ರೆಯ 3ನೇ ಮಹಡಿ ದಟ್ಟ ಕಪ್ಪು ಹೊಗೆಯಿಂದ ಆವೃತವಾಗಿತ್ತು. ವೈದ್ಯಾಧಿಕಾರಿಗಳು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಶುಶ್ರೂಷಕರು, ಸಿಬ್ಬಂದಿ, ರೋಗಿಗಳು, ರೋಗಿಗಳ ಕಡೆಯವರು ತೀವ್ರ ಭಯ- ಆತಂಕದಿಂದ ಓಡಾಡುವ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.
ಭೀಕರ ಅಗ್ನಿ ಅವಘಡದಲ್ಲಿ ಯಾವುದೇ ಸಾವು-ನೋವು, ಪ್ರಾಣಹಾನಿಗಳು ಸಂಭವಿಸಿಲ್ಲ. ಆದರೆ, ಇಎನ್‌ಟಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಬಳಕೆಯಾಗುತ್ತಿದ್ದ ಲಕ್ಷಾಂತರ ರು. ಮೌಲ್ಯದ ಮಹತ್ವದ ಶಸ್ತ್ರಚಿಕಿತ್ಸಾ ಪರಿಕರಗಳು, ವೈದ್ಯಕೀಯ ಉಪಕರಣಗಳು, ವೈಯರಿಂಗ್ ಇತರೆ ಎಲ್ಲವೂ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ, ಆಸ್ಪತ್ರೆ ವೈದ್ಯಾಧಿಕಾರಿಗಳು, ಹಿರಿಯ ವೈದ್ಯರು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಯ ಸುರಕ್ಷತಾ ಕ್ರಮಗಳ ಬಗ್ಗೆ ವೈದ್ಯಾಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಉನ್ನತಮಟ್ಟದ ತನಿಖೆ: ಸಚಿವ ಯು.ಟಿ.ಖಾದರ್ ದಾವಣಗೆರೆ: ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು, ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖರ ಕಾರಣಗಳ ಪತ್ತೆಗೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳ ತನಿಖಾ ತಂಡ ರಚಿಸಿ, ಕೂಲಂಕುಶ ತನಿಖೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಸಿಲಿಂಡರ್ ಸ್ಫೋಟ, ಬೆಂಕಿ ಅವಘಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಘಟನೆಗೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆಗೆ ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ತನಿಖಾ ತಂಡವನ್ನು ರಚಿಸಿ, ಕೂಲಂಕುಷವಾಗಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.ಸ್ಥಳೀಯ ಮಟ್ಟದಲ್ಲೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ತನಿಖೆ ನಡೆಯಲಿದೆ. ರಾಜ್ಯಮಟ್ಟದ ತನಿಖಾ ತಂಡ ಹಾಗೂ ಜಿಲ್ಲಾಧಿಕಾರಿ ನೇತೃತ್ವದ ತಂಡ ಸೇರಿದಂತೆ ಎರಡೂ ವರದಿಗಳು ಬಂದ ನಂತರ ಇಲಾಖೆ ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ ಎಂದು ಯು.ಟಿ.ಖಾದರ್ ಹೇಳಿದ್ದಾರೆನ್ನಲಾಗಿದೆ.