ಸಿಲಿಂಡರ್ ಸ್ಫೋಟ: 10ಕ್ಕೂ ಅಧಿಕ ಕಾರ್ಮಿಕರಿಗೆ ಗಂಭೀರ ಗಾಯ

| Published : Jun 22 2024, 12:46 AM IST

ಸಾರಾಂಶ

ಹೋಟಲ್‌ನ ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟಿಸಿ ಅಲ್ಲಿ ಅಡುಗೆ ಕೆಲಸದಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಗಂಭೀರ ಸ್ವರೂಪದ ಸುಟ್ಟ ಗಾಯಗಳನ್ನು ಅನುಭವಿಸಿರುವ ಭಾರಿ ಅನಾಹುತ ಘಟನೆ ಕಲಬುರಗಿ ನಗರದಲ್ಲಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹೋಟಲ್‌ನ ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟಿಸಿ ಅಲ್ಲಿ ಅಡುಗೆ ಕೆಲಸದಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಗಂಭೀರ ಸ್ವರೂಪದ ಸುಟ್ಟ ಗಾಯಗಳನ್ನು ಅನುಭವಿಸಿರುವ ಭಾರಿ ಅನಾಹುತ ಘಟನೆ ಕಲಬುರಗಿ ನಗರದಲ್ಲಿ ಸಂಭವಿಸಿದೆ.

ನಗರದ ಶರಣಬಸವೇಶ್ವರ ಕೆರೆ ಪಕ್ಕದಲ್ಲಿರುವ ಸಪ್ತಗಿರಿ ಆರೆಂಜ್‌ ಹಸೆರಿನ ಹೋಟೆಲ್​ನಲ್ಲಿ ಈ ಅನಾಹುತ ಸಂಭವಿಸಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಈ ಸ್ಫೋಟದ ಘಟನೆ ಸಂಭವಿಸಿದೆ. ಎಂದಿನಂತೆ ಹೋಟಲ್‌ಗೆ ಬಂದಿದ್ದ ಅಡುಗೆ ಸಿದ್ಧಪಡಿಸುವ ಕುಶಲ ಕೆಲಸಗಾರರು ಈ ಸ್ಫೋಟದಲ್ಲಿ ಬಾರಿ ಗಾಗಳನ್ನು ಅನುಭವಿಸಿ ಆಸ್ಪತ್ರೆ ಸೇರಿದ್ದಾರೆ.

ಹೋಟೆಲ್‍ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸತ್ಯವಾನ್ ಶರ್ಮ ಹರಿಯಾಣ (55), ರಾಕೇಶ್ ಯುಪಿ ಮೂಲದವರ (45), ಮಹೇಶ್ ಕುದುಮುಡು (40), ವಿಠ್ಠಲ್ ಕೊಡಲ್ (42) , ಶಶಿಕಲಾ, ರಮೇಶ್ ಫಿರೋಜಾಬಾದ, ಅಂಬಿಕಾ, ಮಲ್ಲಿನಾಥ, ಶಂಕರ್, ಗುರುಮೂರ್ತಿ, ಪ್ರಶಾಂತ್, ಸತ್ಯವಾನ್, ಅಪ್ಪಾರಾಯ, ಮಲ್ಲಿನಾಥ ಮತ್ತು ಲಕ್ಷ್ಮಣ ಎಂಬುವವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಜಿಮ್ಸ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿದೆ. ಅಡುಗೆ ಸಿದ್ಧ ಮಾಡಲು ಬೆಳಿಗ್ಗೆ ಎಂದಿನಂತೆ ಕಾರ್ಮಿಕರು ಹೋಟೆಲ್ ಗೆ ಆಗಮಿಸಿದ್ದಾರೆ.

ಆಗ ಒಲೆಗಳಿಗೆ ಸಂಪರ್ಕದಲ್ಲಿದ್ದ ಕೆಲವು ಸಿಲಿಂಡರ್‌ನಲ್ಲಿ ಅಡುಗೆ ಅನೀಲ ಖಾಲಿಯಾಗಿರೋದು ಗಮನಕ್ಕೆ ಬಂದಿದೆ. ತಕ್ಷಣ ಅಲ್ಲೇ ಅಡುಗೆ ಅನಿಲ ಸಿಲಿಂಡರ್ ಖಾಲಿಯಾದುದ್ದರಿಂದ ಬೇರೊಂದು ಸಿಲಿಂಡರ್‌ಗೆ ಪೈಪ್ ಕನೆಕ್ಷನ್ ಕೊಡುವಾಗ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.

ನೆಲ ಮಹಡಿಯ ಕಿಚನ್ ರೂಮ್‍ನಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಹೋಟೆಲ್‍ನ ಬಾಗಿಲು, ಕಿಟಕಿ ಒಡೆದು ನುಚ್ಚು ನೂರಾಗಿವೆ. ಇಲ್ಲಿ ಸುಮಾರು 10 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸಿಲಿಂಡರ್ ಸ್ಫೊಟದ ತೀವ್ರತೆಗೆ ಹೋಟೆಲ್ ನ ಎಸಿ ರೂಂ ಸೇರಿ ಇತರೆ ಕೊಠಡಿಗಳು ಹಾನಿಯಾಗಿವೆ. ಕಿಟಕಿಗಳು ಜಖಂ ಆಗಿವೆ. ಸುತ್ತಲಿನ ಅನೇಕ ಮನೆಗಳು, ಕಟ್ಟಡಗಳಿಗೂ ಭಾರಿ ಹಾನಿಯಾಗಿದೆ.

ಸ್ಫೋಟದ ರಭಸಕ್ಕೆ ಬಹು ಮಹಡಿ ಕಟ್ಟಡದ ಹಲವೆಡೆ ಹಾನಿಯಾಗಿದೆ. ಹೋಟೆಲ್​ ಟೇಬಲ್​ಗಳು, ಸಾಮಗ್ರಿಗಳು ಚಲ್ಲಾಪಿಲ್ಲಿ ಆಗಿ ಬಿದ್ದಿವೆ. ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಸಿಲಿಂಡರ್ ಸ್ಪೋಟದ ಬಾರಿ ಸದ್ದು ಕೇಳಿದ್ದರಿಂದ ಜನ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಅನಾಹುತದ ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಆರ್.ಚೇತನ್, ಡಿಸಿಪಿ ಕನಿಕಾ ಸಿಕ್ರಿವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಟಲ್‌ನಲ್ಲಿ ಗ್ರಾಹಕರಿರಲಿಲ್ಲ, ಹೆಚ್ಚಿನ ಅನಾಹುತ ತಪ್ಪಿತು: ಹೋಟೆಲ್ ಮಾಲೀಕ ಶರಣಬಸಪ್ಪ ಪ್ರತಿಕ್ರಿಯಿಸಿ, ಹೋಟಲ್‌ನಲ್ಲಿ ಇನ್ನೂ ಗ್ರಾಹಕರು ಬಂದಿರಲಿಲ್ಲ, ಹೀಗಾಗಿ ಸ್ಫೋಟದಿಂದಾಗಿ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ, ಪ್ರಾಣಾಪಾಯ ತಪ್ಪಿತು ಎಂದು ನಿಟ್ಟುಸಿರು ಬಿಟ್ಟಿದ್ದಾನೆ.

‘ಹೋಟೆಲ್​ ಅನ್ನು ಬೆಳಿಗ್ಗೆ 8 ಗಂಟೆಗೆ ತೆರೆಯಲಾಗುತ್ತದೆ. ಆದರೆ, ಘಟನೆ ಇಂದು ಬೆ.6.30ಕ್ಕೆ ನಡೆದಿದ್ದು, ಹೋಟೆಲ್​ಗೆ ಗ್ರಾಹಕರು ಬಾರದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಅಂದಾಜು ಆರು ಜನರಿಗೆ ಗಾಯಗಳಾಗಿದ್ದು, ಇಬ್ಬರು ಗಂಭೀರಗಾಯಗೊಂಡಿದ್ದಾರೆ’ ಎಂದು ಶರಣಬಸಪ್ಪ ಸ್ಥಳಕ್ಕೆ ಭೇಟಿ ನೀಡಿದ್ದ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ ನಗರ ಪೊಲೀಸ್ ಉಪ ಆಯುಕ್ತೆ ಕನ್ನಿಕಾ ಸಿಕ್ರಿವಾಲ್ ಅವರು, ‘ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಎಂಬಂತೆ ಕಂಡುಬಂದಿದೆ. ಸಂಪೂರ್ಣ ತನಿಖೆ ನಂತರ ಸತ್ಯಾಂಶ ತಿಳಿದುಬರಲಿದೆ’ ಎಂದು ಅವರು ತಿಳಿಸಿದ್ದಾರೆ.

ಬೆಳಗ್ಗೆ 6.25ರ ಸುಮರಿಗೆ ತಮಗೆ ಕರೆ ಬಂತು. ತಕ್ಷಣ ಕಾರ್ಯಪ್ರವತ್ತರಾದೇವು. ಸ್ಥಳಕ್ಕೆ ಧಾವಿಸಿ ಹೋಗಿ ಬೆಂಕಿ ನಂದಿಸಿದೆವು. ಸ್ಥಳದಲ್ಲಿ ಗಾಯಗೊಂಡದ್ದ ಕಾರ್ಮಿಕರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಅಗ್ನಿಶಾಮಕ ದಳ ಅಧಿಕಾರಿ ಅಂಕೋಶ್‌ ಅರ್ಜುನ್‌ ಕನ್ನಡಪ್ರಭ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಕಿ, ಸ್ಫೋಟಕ್ಕೇನು ಕಾರಣವೆಂಬುದು ತನಿಖೆಯಿಂದ ಮಾತ್ರ ತಿಳದು ಬರಲಿದೆ. ಆ ಕೆಲಸ ಮುಂದುವರಿದಿದೆ ಎಂದೂ ಅವರು ಹೇಳಿದ್ದಾರೆ.ಓಡಿ ಹೋಗಿ ಹಲವರು ಬಚಾವ್‌

ಬೆಳಗ್ಗೆ 8 ಕ್ಕೆ ಹೋಟಲ್‌ ಶುರುವಾಗುತ್ತಿರೋದರಿಂದ ಬೇಗ ಬಂದು ಅಡುಗೆ ಕೆಲಸಕ್ಕೆ ಸಿಬ್ಬಂದಿ ತೊಡಗಿಸಿಕೊಳ್ಳುತ್ತಿದ್ದರು. ಅಡುಗೆ ಸಿಬ್ಬಂದಿ ಉಪಹಾರ ತಯಾರಿಸುವುದರಲ್ಲಿ ನಿರತರಾಗಿದ್ದ ಸಮಯದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿರುವ ಪರಿಣಾಮ, ಸ್ಥಳದಲ್ಲಿದ್ದ 10ಕ್ಕೂ ಅಧಿಕ ಕಾರ್ಮಿಕರಿಗೆ ಸುಟ್ಟುಗಾಯಗಳಾಗಿವೆ. ಉಳಿದವರು ಹೊರಗೆ ಓಡಿ ಹೋಗಿ ಬಚಾವ್‌ ಆಗಿದ್ದಾರೆ. ಈ ಪೈಕಿ ಗಂಭೀರಗಾಯಗೊಂಡ ಇಬ್ಬರನ್ನು ಜಿಮ್ಸ್‌ನ ಟ್ರಾಮಾ ಕೇರ್ ಸೆಂಟರ್‌ಗೆ ಹಾಗೂ ಉಳಿದವರನ್ನು ಜಿಲ್ಲಾಸ್ಪತ್ರೆಯ ಸಾಮಾನ್ಯ ವಾರ್ಡ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.