ಸಾರಾಂಶ
ಹುಬ್ಬಳ್ಳಿ: ನಿದ್ದೆಗಣ್ಣಲ್ಲಿ ಕಾಲು ತಾಗಿ ನೆಲಕ್ಕುರುಳಿದ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
9 ಜನರಲ್ಲಿ 8 ಜನ ಮಾಲಾಧಾರಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆ ಆವರಣದಲ್ಲಿ ಗಾಯಾಳುಗಳ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಗಾಯಗೊಂಡವರಲ್ಲಿ ಒಬ್ಬ ಬಾಲಕನೂ ಇದ್ದಾನೆ.
ವಿನಾಯಕ ಬಾರಕೇರ (12), ಪ್ರಕಾಶ ಬಾರಕೇರ (42), ತೇಜೇಶ್ವರ ಸಾತ್ರಿ(26), ಶಂಕರ ರಾಯನಗೌಡ್ರ (27), ಪ್ರವೀಣ ಚಲವಾದಿ (24), ಅಜ್ಜಾಸ್ವಾಮಿ (58), ರಾಜು ಹರ್ಲಾಪುರ (21), ಸಂಜಯ ಸವದತ್ತಿ (20) ಮತ್ತು ಮಂಜುನಾಥ ತೋರದ (22)ರಷ್ಟು ಸುಟ್ಟಗಾಯಗಳಾಗಿವೆ. ಇವರೆಲ್ಲ ಸಾಯಿನಗರದ ನಿವಾಸಿಗಳು.
ಆಗಿದ್ದೇನು?:
ಸಾಯಿನಗರದ ಅಚ್ಚವ್ವನ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ಎರಡು ಮಹಡಿಗಳಿವೆ. ಮೇಲ್ಮಹಡಿಯಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಾನ ಮಾಡಲಾಗಿದೆ. ಇಲ್ಲಿ ಒಟ್ಟು 14 ಜನ ಮಾಲಾಧಾರಿಗಳು ತಮ್ಮ ವ್ರತ ಆಚರಣೆ ಮಾಡುತ್ತಾ, ವಾಸವಾಗಿದ್ದರು. 14 ಜನರಲ್ಲಿ ಐವರು ಕೆಳಮಹಡಿಯಲ್ಲಿ ಮಲಗಿದ್ದರೆ, ಇನ್ನುಳಿದ 9 ಜನ ಮೇಲ್ಮಹಡಿಯಲ್ಲಿ ಮಲಗುತ್ತಿದ್ದರು.
ಮೇಲ್ಮಹಡಿಯಲ್ಲೇ ಅಡುಗೆ ಹಾಗೂ ಪೂಜೆ ಮಾಡುತ್ತಾರೆ. ಅದೇ ರೀತಿ ಭಾನುವಾರ ರಾತ್ರಿ ಪೂಜೆ ಮುಗಿಸಿ ಪ್ರಸಾದ ಸ್ವೀಕರಿಸಿ ಮಲಗಿದ್ದರು. ಇವರ ಪಕ್ಕದಲ್ಲೇ ಸಿಲಿಂಡರ್ ಇತ್ತು. ಮಾಲಾಧಾರಿಗಳ ಪೈಕಿ ಒಬ್ಬ ನಿದ್ದೆಗಣ್ಣಲ್ಲಿ ಸಿಲಿಂಡರ್‌ಗೆ ಕಾಲು ಬಡಿದು ಸಿಲಿಂಡರ್ ನೆಲಕ್ಕೆ ಉರುಳಿದೆ. ಅದರ ರೆಗ್ಯುಲೇಟರ್ ಕೊಂಚ ಸಡಿಲವಾಗಿ ಗ್ಯಾಸ್ ಸೋರಿಕೆಯಾಗಿದೆ. ನಿದ್ದೆಯಲ್ಲಿದ್ದ ಒಂಬತ್ತು ಜನರಿಗೆ ಸಿಲಿಂಡರ್ ಬಿದ್ದು ಅನಿಲ ಸೋರಿಕೆಯಾಗಿರುವುದು ಅರಿವಿಗೆ ಬಂದಿಲ್ಲ. ಇದರಿಂದ ಗ್ಯಾಸ್ ಇಡೀ ಮೇಲ್ಮಹಡಿ ಆವರಿಸಿದೆ. ಸ್ವಲ್ಪ ಹೊತ್ತಿನಲ್ಲೇ ಪಕ್ಕದಲ್ಲೇ ಇದ್ದ ದೀಪದ ಬೆಂಕಿ ತಾಗಿ ಕ್ಷಣಮಾತ್ರದಲ್ಲೇ ರೂಮ್ ಎಲ್ಲ ಆವರಿಸಿದ್ದ ಬೆಂಕಿಯಲ್ಲೇ ಇವರು ಸಿಲುಕಿದ್ದಾರೆ. ಬೆಂಕಿಯ ತೀವ್ರತೆಗೆ ಅಲ್ಲಿದ್ದ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿದ್ದು, ಅಯ್ಯಪ್ಪಸ್ವಾಮಿ ಭಾವಚಿತ್ರ ಹಾಗೂ ಮಾಲಾಧಾರಿಗಳ ಬಟ್ಟೆ, ದವಸ-ಧಾನ್ಯ ಸುಟ್ಟು ಭಸ್ಮವಾಗಿವೆ.
ಬಳಿಕ ಮೇಲ್ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ತದನಂತರ 9 ಜನರನ್ನು ಕೆಳಮಹಡಿಯಲ್ಲಿದ್ದ ಇನ್ನುಳಿದ ಐವರು ಹಾಗೂ ಸಾರ್ವಜನಿಕರು ಕೆಎಂಸಿಆರ್‌ಐಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿಯೇ ಗಾಯಾಳುಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ರಚಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ. ರವೀಂದ್ರ ಯಲಿಗಾರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಶೇ. 25ರಷ್ಟು ಸುಟ್ಟಗಾಯವಾಗಿರುವ ಬಾಲಕ ವಿನಾಯಕ ಬಾರಕೇರ್ ಹೊರತುಪಡಿಸಿ ಉಳಿದ ಎಂಟು ಮಂದಿಗೂ ಶೇ. 80ರಷ್ಟು ಸುಟ್ಟಗಾಯಗಳಾಗಿವೆ. ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಟ್ಟಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಹೊರ ಜಿಲ್ಲೆಗಳಿಂದಲೂ ತಜ್ಞ ವೈದ್ಯರನ್ನು ಕರೆಸಲು ಚಿಂತನೆ ನಡೆಸಲಾಗಿದೆ ಎಂದು ಕೆಂಎಸಿ–ಆರ್‌ಐ ನಿರ್ದೇಶಕ ಎಸ್.ಎಫ್. ಕಮ್ಮಾರ ತಿಳಿಸಿದ್ದಾರೆ.
ಸಚಿವರು, ಶಾಸಕರ ಭೇಟಿ:
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸನ ಮಾಲೀಕ ಡಾ. ವಿಎಸ್‌ವಿ ಪ್ರಸಾದ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೋಹನ ಗುರುಸ್ವಾಮಿ ಸೇರಿದಂತೆ ಹುಬ್ಬಳ್ಳಿ-ಧಾರವಾಡದ ವಿವಿಧ ಮಾಲಾಧಾರಿಗಳು ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಮುಗಿಲು ಮುಟ್ಟಿದ ರೋದನ:
ಆಸ್ಪತ್ರೆ ಆವರಣದಲ್ಲಿ ಗಾಯಾಳು ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಬರುತ್ತಿದ್ದ ಗಣ್ಯರ ಎದುರು ಹೇಗಿದೆ ನಮ್ಮ ಮಕ್ಕಳ ಆರೋಗ್ಯ ಎಂದು ಕೇಳಿ ಕಣ್ಣೀರು ಸುರಿಸುತ್ತಿದ್ದರು.
ದಾಸ್ತಾನು ಕೊಠಡಿಯ ಕೀಲಿ ಒಡೆದು ಔಷಧಿ ತೆಗೆದರು!
ಚಿಕಿತ್ಸೆಗೆ ಆಗಮಿಸಿದ್ದ ಮಾಲಾಧಾರಿಗಳಿಗೆ ಚಿಕಿತ್ಸೆ ನೀಡಲು ಕೆಎಂಸಿಆರ್‌ಐನಲ್ಲಿ ಡ್ಯೂಟಿ ಮೇಲಿದ್ದ ಸಿಎಂಒ ನಿರ್ಲಕ್ಷ್ಯ ತೋರಿದ್ದಾರೆ. ಔಷಧಿ ಇಲ್ಲ; ದಾಸ್ತಾನಿನ ಕೀಲಿ ಇಲ್ಲ ಎಂದು ಹೇಳಿ ಹೊರಗಿನಿಂದ ಔಷಧಿ ತರಿಸಿದ್ದಾರೆ. ಕೊನೆಗೆ ದಾಸ್ತಾನು ರೂಮಿನ ಕೀಲಿ ಒಡೆದು ಔಷಧಿ ನೀಡಿದ ಬಳಿಕ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ವಿಚಾರಣೆಗೆ ಕೆಎಂಸಿಆರ್‌ಐನ ನಿರ್ದೇಶಕರು ಪ್ರತ್ಯೇಕ ಕಮಿಟಿ ರಚಿಸಿದ್ದಾರೆ.
ಭಾನುವಾರ ರಾತ್ರಿ ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆಯಾಗಿ ಗಾಯಗೊಂಡಿದ್ದ 9 ಜನರನ್ನು ಕೆಲ ಮಾಲಾಧಾರಿಗಳು, ಸಾರ್ವಜನಿಕರು ಕರೆದುಕೊಂಡು ಬಂದಿದ್ದರು. ಆದರೆ, ಸುಟ್ಟ ಗಾಯಕ್ಕೆ ಹಚ್ಚುವ ಬರ್ನಾಲ್ ಮಲಾಮು ಇಲ್ಲ ಹೊರಗಿನಿಂದ ತೆಗೆದುಕೊಂಡು ಬನ್ನಿ ಎಂದು ವೈದ್ಯರು ಹೇಳಿದರಂತೆ. ಅದರಂತೆ ಹೊರಗಿನಿಂದ ತಂದುಕೊಟ್ಟಿದ್ದಾರೆ. ಬಳಿಕ ದಾಸ್ತಾನು ಇಲ್ಲವೇ ಎಂಬ ಪ್ರಶ್ನೆಗೆ ಔಷಧಿ ಸಂಗ್ರಹಗಾರದ ಕೀಲಿ ಇಲ್ಲ ಎಂದು ವೈದ್ಯರು ಉಡಾಫೆಯ ಉತ್ತರ ನೀಡಿದರಂತೆ. ಬಳಿಕ ಕೆಲ ಮಾಲಾಧಾರಿಗಳು ದಾಸ್ತಾನು ಸಂಗ್ರಹಗಾರದ ಕೀಲಿ ಒಡೆದು ಕೊಟ್ಟಿದ್ದಾರೆ. ತದನಂತರ ಚಿಕಿತ್ಸೆ ನೀಡಲಾಯಿತು ಎಂದು ಗಾಯಾಳುಗಳ ಸಂಬಂಧಿಕರು, ಇನ್ನುಳಿದ ಮಾಲಾಧಾರಿಗಳು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ಎದುರಿಗೆ ಅಳಲು ತೋಡಿಕೊಂಡರು.
ವೈದ್ಯರ ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ನಡೆಸಲು ಡಾ. ರಾಜಶೇಖರ ದ್ಯಾಬೇರಿ ಅವರ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದೆ. ನಿರ್ಲಕ್ಷ್ಯ ತೋರಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಕೆಎಂಸಿಆರ್‌ಐನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ತಿಳಿಸಿದ್ದಾರೆ.