ಅನ್ಯ ರಾಜ್ಯಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿಲ್ಲ. ರಾಜ್ಯದಲ್ಲಿ ಮಾತ್ರ ಈ ಸಮಸ್ಯೆಯಾಗಿದ್ದು, ಇದು ಯುದ್ಧದ ಪರಿಣಾಮವೋ ಅಥವಾ ವ್ಯವಸ್ಥಿತ ಹುನ್ನಾರವೋ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ ಹೋಟೆಲ್‌ ಉದ್ಯಮಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ:

ಮಧ್ಯಪ್ರಾಚ್ಯ ಯುದ್ಧದ ನೆಪವೊಡ್ಡಿ ಹೋಟೆಲ್‌ಗಳಿಗೆ ಮಂಗಳವಾರದಿಂದ ಸಿಲಿಂಡ‌ರ್ ಪೂರೈಕೆ ಸ್ಥಗಿತಗೊಳಿಸಿದ್ದು, ಬುಧವಾರ ರಾತ್ರಿ ಶೇ. 35ರಷ್ಟು ಹೋಟೆಲ್‌ ಬಂದ್‌ ಆಗಿವೆ. ಸಿಲಿಂಡರ್‌ಗೆ ಪರ್ಯಾಯ ವ್ಯವಸ್ಥೆ ನಮ್ಮಲ್ಲಿ ಇಲ್ಲದ ಕಾರಣ ಇನ್ನೆರಡು ದಿನದಲ್ಲಿ ಎಲ್ಲ ಹೋಟೆಲ್‌ ಸಂಪೂರ್ಣವಾಗಿ ಬಂದ್‌ ಆಗಲಿವೆ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಸದಸ್ಯ ಸುಧಾಕರ ಶೆಟ್ಟಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯ ರಾಜ್ಯಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿಲ್ಲ. ರಾಜ್ಯದಲ್ಲಿ ಮಾತ್ರ ಈ ಸಮಸ್ಯೆಯಾಗಿದ್ದು, ಇದು ಯುದ್ಧದ ಪರಿಣಾಮವೋ ಅಥವಾ ವ್ಯವಸ್ಥಿತ ಹುನ್ನಾರವೋ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ ಎಂದರು.

ಮುನ್ಸೂಚನೆ ನೀಡದೆ ಸಿಲಿಂಡರ್‌ ಪೂರೈಕೆ ಸ್ಥಗಿತಗೊಳಿಸಿದ್ದು, ಖಾಸಗಿ ಏಜೆನ್ಸಿಯೊಂದಿಗೆ ಖರೀದಿಸಲು ಅವರ ಬಳಿಯೂ ಸಿಲಿಂಡರ್‌ ಇಲ್ಲ. ಇದ್ದರೂ ಮೊದಲು ₹ 1900 ಇರುವುದು ಇದೀಗ ₹ 3000 ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಸಮಸ್ಯೆ ನಿವಾರಿಸಲು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಪ್ರಶ್ನಿಸಿದರೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಹೀಗಾಗಿ ಎರಡು ಸರ್ಕಾರ ತಕ್ಷಣ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

1.20 ಲಕ್ಷ ಕಾರ್ಮಿಕರು:

ಹುಬ್ಬಳ್ಳಿಯಲ್ಲಿ ಅಂದಾಜು 5,000 ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ 60,000ಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, 1.20 ಲಕ್ಷ ಕಾರ್ಮಿಕರಿದ್ದಾರೆ. ಹೋಟೆಲ್‌ ಬಂದಾದರೆ ಕೆಲಸವಿಲ್ಲದೆ ಮನೆ ಹೋಗುತ್ತಾರೆ. ಪುನಃ ಹೋಟೆಲ್‌ ತೆರೆದಾಗ ಕಾರ್ಮಿಕರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಉಗ್ರ ಹೋರಾಟದ ಎಚ್ಚರಿಕೆ:

ಸಿಲಿಂಡರ್ ಪೂರೈಕೆ ಬಗ್ಗೆ ಗುರುವಾರ ನಮಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ಬಳಿಕ ಬೇಕರಿ ಮತ್ತು ಸ್ವೀಟ್ಸ್‌ ಮಾರ್ಟ್‌ ಅಂಗಡಿಯವರು ಸೇರಿ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಸಮರ್ಪಕವಾಗಿ ಪೂರೈಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಗಾಯತೊಂಡೆ, ಸರ್ವೋತ್ತಮ ಕಾಮತ್ ಇದ್ದರು.