ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗೆ ಡಿ. ಸುಧಾಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2004 ರಿಂದ ಇಲ್ಲಿಯವರೆಗೆ ಸತತ ನಾಲ್ಕು ಬಾರಿ ಅಧ್ಯರಾಗಿದ್ದು ಅಧಿಕಾರವಹಿಸಿದ್ದ ಅವರು ಮತ್ತೆ ಐದನೇ ಅವಧಿಗೆ ಮುಂದುವರಿದಿದ್ದಾರೆ. ಹಾಗೂ ಹೊಸದುರ್ಗದ ಮಂಜುನಾಥ್ ಉಪಾಧ್ಯರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಸಚಿವ ಡಿ. ಸುಧಾಕರ್ ಓರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಅವಿರೋಧ ಆಯ್ಕೆ ಎಂದು ಘೋಷಿಸಿದರು. ಐದನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, 2024ನೇ ಸಾಲಿಗೆ ಬ್ಯಾಂಕ್ ಒಟ್ಟಾರೆ ₹11.83 ಕೋಟಿ ಲಾಭ ಗಳಿಸಿದೆ ಎಂದರು.69 ವರ್ಷಗಳ ಭವ್ಯ ಇತಿಹಾಸವುಳ್ಳ ಸಿಡಿಸಿಸಿ ಬ್ಯಾಂಕ್ ರೈತರ ಅವಶ್ಯಕತೆಗನುಗುಣವಾಗಿ ಸಾಲ ನೀಡುತ್ತಾ ಬಂದಿದೆ. ಸಾಲ ಹಂಚಿಕೆ, ವಸೂಲಾತಿ, ಠೇವಣಿ ಸಂಗ್ರಹ, ಸ್ವಸಹಾಯ ಗುಂಪುಗಳ ರಚನೆ, ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದರೂ ಸರ್ಕಾರದ ನಿರ್ದೇಶನದಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಮತ್ತು ಶೇ.3ರ ಬಡ್ಡಿ ದರದಲ್ಲಿ ಭೂ ಅಭಿವೃದ್ಧಿ ಸಾಲ ನೀಡಲಾಗಿದೆ ಎಂದರು.2004 ರವರೆಗೆ ಕೇವಲ 5369 ರೈತರಿಗೆ ₹7 ಕೋಟಿ ಮಾತ್ರ ಸಾಲ ನೀಡಲಾಗಿತ್ತು. 2024 ಸಾಲಿನ ಅಂತ್ಯಕ್ಕೆ 61236 ಮಂದಿ ರೈತರಿಗೆ ₹730 ಕೋಟಿ ಕೃಷಿ ಸಾಲ ವಿತರಿಸಿದೆ. ಇವರಲ್ಲಿ 15785 ಮಂದಿ ಎಸ್ಸಿ, ಎಸ್ಟಿ ರೈತರಿಗೆ ₹110 ಕೋಟಿ, 49ಸಾವಿರ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ₹340 ಕೋಟಿ, 17397 ಮಹಿಳೆಯರಿಗೆ ₹137 ಕೋಟಿ, 1327 ಮಂದಿ ಅಲ್ಪ ಸಂಖ್ಯಾತರಿಗೆ ₹11 ಕೋಟಿ ಹಾಗೂ ಜಿಲ್ಲೆಯ 487 ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ₹9 ಕೋಟಿ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.2004 ನೇ ಸಾಲಿನವರೆಗೆ ಶೇರು ಬಂಡವಾಳ ಕೇವಲ ₹3.91 ಕೋಟಿ ಇತ್ತು. 2024 ನೇ ಸಾಲಿಗೆ ಅದು ₹100 ಕೋಟಿ ದಾಟಿದೆ. ಇದಲ್ಲದೇ ₹32 ಕೋಟಿಯಷ್ಟಿದ್ದ ಠೇವಣಿ ಕೂಡಾ ₹573 ಕೋಟಿಗೆ ಹೆಚ್ಚಳವಾಗಿದೆ. 2004 ರಲ್ಲಿ ಬ್ಯಾಂಕ್ ನ ದುಡಿಯುವ ಬಂಡವಾಳ ₹61.40 ಕೋಟಿಯಷ್ಟಿತ್ತು. 2024 ನೇ ಸಾಲಿಗೆ ₹1276 ಕೋಟಿ ಆಗಿದೆ ಎಂದು ಸುಧಾಕರ್ ಹೇಳಿದರು.ಕಳೆದ ಐದು ವರ್ಷದಿಂದ ಬ್ಯಾಂಕಿನ ಸದಸ್ಯರಿಗೆ ಶೇ.2 ಮತ್ತು ಶೇ.3 ರಷ್ಟು ಡಿವಿಡೆಂಡ್ ನೀಡಲಾಗಿದೆ. 2004 ರವರೆಗೆ ಕೇವಲ 9 ಶಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 2024 ರ ಅಂತ್ಯಕ್ಕೆ 22 ಶಾಖೆಗಳಿವೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 21 ಡಿಸಿಸಿ ಬ್ಯಾಂಕುಗಳಲ್ಲಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ 2017-18 ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಅಫೆಕ್ಸ್ ಬ್ಯಾಂಕ್ ನಿಂದ ಪ್ರಥಮ ಬಹುಮಾನ ಪಡೆದಿತ್ತು ಎಂದರು.
ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 351 ಡಿಸಿಸಿ ಬ್ಯಾಂಕುಗಳ ಪೈಕಿ 2021-22 ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ರಾಷ್ಟ್ರೀಯ ಸಹಕಾರ ಬ್ಯಾಂಕುಗಳ ಫೆಡರೇಷನ್ ನಿಂದ ಎರಡನೇ ಬಹುಮಾನ ಪಡೆಯಲಾಗಿತ್ತೆಂದು ಸುಧಾಕರ್ ವಿವರಿಸಿದರು.ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಇಲಿಯಾಸ್ ಉಲ್ಲಾ ಷರೀಫ್, ನಿರ್ದೇಶಕರಾದ ರಘುರಾಮ ರೆಡ್ಡಿ, ದ್ಯಾಮಣ್ಣ, ನಿಶಾ ನಿಜಯಣ್ಣ, ವಿನೋದ ಸ್ವಾಮಿ, ತಿಪ್ಪೇಸ್ವಾಮಿ, ಮಾಧುರಿ ಗಿರೀಶ್, ನಾಗಿರೆಡ್ಡಿ, ಡಾ. ಅನಂತ್, ಜಗದೀಶ್ ಇದ್ದರು.