ಸಾರಾಂಶ
ನರಗುಂದ: ದಿ. ಡಿ. ದೇವರಾಜ ಅರಸು ಅವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಕಾನೂನು ಬದ್ಧವಾಗಿ ಸೌಲಭ್ಯಗಳನ್ನು ಒದಗಿಸಿದ್ದಾರೆ. ಉತ್ತಮ ಆಡಳಿತದಿಂದ ಅಧಿಕಾರದ ಸಂಪತ್ತಿನ ಹಂಚಿಕೆಯಾಗಿ ಹಿಂದುಳಿದ ವರ್ಗದವರು ವಿವಿಧ ಹುದ್ದೆಗಳನ್ನು ಅಲಂಕರಿಸುವಂತಾಗಿದೆ ಎಂದು ಶಿಕ್ಷಕ ಪ್ರಭಾಕರ ಉಳ್ಳಾಗಡ್ಡಿ ಹೇಳಿದರು. ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು 109ನೇ ಜನ್ಮ ದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಆನಂತರ ಮಾತನಾಡಿದರು.
ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ಭೂಮಿಯನ್ನು ಉಳುವವನೇ ಒಡೆಯನಾಗಿದ್ದಾನೆ. ಇದಕ್ಕೆಲ್ಲ 1970ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜು ಅರಸು ಕಾರಣರಾಗಿದ್ದಾರೆ. ಪ್ರತಿ ವ್ಯಕ್ತಿಯ ಸಾಧನೆ ಹಿಂದೆ ತಾಯಿ ಇರುವಂತೆ, ಅಷ್ಟೇ ಮುಖ್ಯವಾಗಿ ಸಾಧನೆ ಮಾಡುವ ವಿದ್ಯಾರ್ಥಿಗಳ ಹಿಂದೆ ವಸತಿ ನಿಲಯಗಳಿವೆ. ಇವುಗಳು ನಮ್ಮ ಕನಸ್ಸಿನ ಕೂಸಾಗಿವೆ ಎಂದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಹಿಂದುಳಿದ ವರ್ಗಗಳ ಇಲಾಖೆಯಡಿ ವಿದ್ಯಾಸಿರಿ, ವಿದ್ಯಾರ್ಥಿ ವೇತನ, ಶುಲ್ಕ ಮರು ಪಾವತಿ ಯೋಜನೆ, ಆಶ್ರಮ ಶಾಲೆಗಳು, ವೃತ್ತಿ ಕೌಶಲ್ಯ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್‌ಸಿ, ಕೆಪಿಎಸ್‌ಸಿ ಮತ್ತು ಬ್ಯಾಂಕಿಂಗ್ ಮುಂತಾದವುಗಳಿಗೆ ತರಬೇತಿ ನೀಡಲಾಗುತ್ತದೆ. ಹಲವಾರು ಜನಪ್ರಿಯ ಯೋಜನೆಗಳು ಜಾರಿಗೆ ಬಂದಿವೆ ಎಂದು ತಿಳಿಸಿದರು.
ಈ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಮೆಟ್ರಿಕ್ ಪೂರ್ವ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಮತ್ತು ಕ್ರೀಡೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಅರಸು ಅವರ ಜನ್ಮದಿನಾಚರಣೆ ನಿಮಿತ್ತ ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ತಾಪಂ ಇಒ ಎಸ್.ಕೆ. ಇನಾಮದಾರ, ದ್ಯಾಮಣ್ಣ ಸವದತ್ತಿ, ಸಿದ್ದಪ್ಪ ಯಲಿಗಾರ, ನೀಲಪ್ಪ ಗುಡದನ್ನವರ, ಡಾ. ಸಿ.ಕೆ. ರಾಚನಗೌಡ್ರ, ರಾಮಕೃಷ್ಣ ಗೊಂಬಿ, ಮೊರಾರ್ಜಿ ಶಾಲೆ ಪ್ರಾಂಶುಪಾಲರಾದ ರೂಪಾ ನಾಯ್ಡು, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಬಿ. ಚಿನಗುಡಿ, ಯು.ಎಸ್. ಅವರಾಧಿ, ಎಸ್.ಪಿ. ಪಾಟೀಲ, ಮಂಜುಳಾ ಯರೇಕಿತ್ತೂರ, ಕಸ್ತೂರಿ ಬೆಳವಣಿಕಿ ಹಾಗೂ ವಿದ್ಯಾರ್ಥಿಗಳು ಇದ್ದರು.