ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ದಕ್ಷಿಣ ಕನ್ನಡ ಜಿಲ್ಲೆಯನ್ನು ಅಧಿಕೃತವಾಗಿ ಜಿಲ್ಲಾ ರಫ್ತು ಕೇಂದ್ರ (District Export Hub - DEH) ಎಂದು ಘೋಷಿಸಿರುವುದಾಗಿ ದೃಢಪಡಿಸಿದೆ.

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳವಾರ ಸಂಸತ್‌ನಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ದಕ್ಷಿಣ ಕನ್ನಡ ಜಿಲ್ಲೆಯನ್ನು ಅಧಿಕೃತವಾಗಿ ಜಿಲ್ಲಾ ರಫ್ತು ಕೇಂದ್ರ (District Export Hub - DEH) ಎಂದು ಘೋಷಿಸಿರುವುದಾಗಿ ದೃಢಪಡಿಸಿದೆ.ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಜಿಲ್ಲೆಯ ರಫ್ತು ಸಾಮರ್ಥ್ಯದ ಬಗ್ಗೆ ವಿವರವಾದ ಪ್ರಶ್ನೆ ಎತ್ತಿದ್ದರು. ಈ ಪ್ರಶ್ನೆಗಳಲ್ಲಿ ಮುಖ್ಯವಾದವು:ಸಮುದ್ರ ಆಹಾರ (Seafood), ಗೋಡಂಬಿ (Cashew) ಮತ್ತು ತೆಂಗಿನ ಉತ್ಪನ್ನಗಳನ್ನು ಕೇಂದ್ರೀಕರಿಸಿ ದಕ್ಷಿಣ ಕನ್ನಡವನ್ನು ಜಿಲ್ಲಾ ರಫ್ತು ಕೇಂದ್ರವನ್ನಾಗಿ ಮಾಡಲಾಗಿದೆಯೇ?ಅಂತರಾಷ್ತ್ರೀಯ ಸಾಗಾಣಿಕೆ ಸಮಸ್ಯೆಗಳು ಮತ್ತು ಹಡಗು ಸಾಗಾಟ ದರಗಳಲ್ಲಿ ಏರಿಕೆಯಿಂದ ರಫ್ತುದಾರರಿಗೆ ಆಗುತ್ತಿರುವ ತೊಂದರೆಗಳಿಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ?ನ್ಯೂ ಮಂಗಳೂರು ಬಂದರು ಸಾಮರ್ಥ್ಯ ವೃದ್ಧಿ, ಗೋದಾಮು ಸೌಲಭ್ಯ ಸುಧಾರಣೆ ಸೇರಿದಂತೆ ರಫ್ತು ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳಿವೆಯೇ?ಸ್ಥಳೀಯ ಮೌಲ್ಯ ಸರಪಳಿಯನ್ನು ಉಳಿಸಿಕೊಳ್ಳಲು ಮತ್ತು ಹೊರಗಿನ ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡಲು ಲಾಜಿಸ್ಟಿಕ್ಸ್ ಸಬ್ಸಿಡಿ ಸೇರಿದಂತೆ ಯಾವ ನೀತಿ ಅಥವಾ ಹಣಕಾಸು ಪ್ರೋತ್ಸಾಹ ಒದಗಿಸಲಾಗಿದೆ?

ಈ ಎಲ್ಲ ಪ್ರಶ್ನೆಗಳಿಗೆ ಬುಧವಾರ ಸಂಸತ್‌ನಲ್ಲಿ ಕೇಂದ್ರ ವಾಣಿಜ್ಯ ರಾಜ್ಯ ಸಚಿವ ಜಿತಿನ್ ಪ್ರಸಾದ ಉತ್ತರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಜಿಲ್ಲಾ ರಫ್ತು ಕೇಂದ್ರವಾಗಿ ಘೋಷಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯಡಿ ಸಮುದ್ರ ಆಹಾರ ಮತ್ತು ಗೋಡಂಬಿ ಉತ್ಪನ್ನಗಳನ್ನು ಪ್ರಮುಖ ರಫ್ತು ಉತ್ಪನ್ನಗಳೆಂದು ಗುರುತಿಸಲಾಗಿದೆ.ಈ ಮನ್ನಣೆಯಿಂದ ಸ್ಥಳೀಯ ಕೈಗಾರಿಕೆಗಳ ಬಲವರ್ಧನೆ, ಮೌಲ್ಯವರ್ಧಿತ ಉತ್ಪಾದನೆ ಹೆಚ್ಚಳ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದಕ್ಷಿಣ ಕನ್ನಡದ ಉದ್ಯಮಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಸಚಿವಾಲಯ ತಿಳಿಸಿದೆ.

ಈ ಸಾಧನೆಗೆ ಪ್ರೇರಣೆಯಾಗಿ ನಿಂತ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನಕ್ಕೆ ಜಿಲ್ಲೆಯ ರಫ್ತುದಾರರು, ಕೈಗಾರಿಕಾ ವಲಯದವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.