ಸಾರಾಂಶ
ದೆಹಲಿಯಲ್ಲಿ ಬುಧವಾರ ನಡೆದ ಅಭ್ಯರ್ಥಿಗಳ ಆಯ್ಕೆ ಕುರಿತ ಸಭೆಯಲ್ಲಿ ಈ ನಾಲ್ಕು ಹೆಸರು ಚರ್ಚೆಗೆ ಬಂದಿದೆ. ಅಂತಿಮವಾಗಿ ಈ ನಾಲ್ವರ ಹೆಸರನ್ನು ಶಿಫಾರಸು ಮಾಡಿ ಸಂಸದೀಯ ಸಮಿತಿಗೆ ಕಳುಹಿಸಲಾಗಿದ್ದು, ಅಲ್ಲಿ ಒಬ್ಬರ ಹೆಸರು ಅಂತಿಮಗೊಂಡು ಘೋಷಣೆಯಾಗಲಿದೆ. ಇಲ್ಲವೇ ಬೇರೆಯೇ ಹೊಸ ಹೆಸರು ಘೋಷಣೆಯಾದರೂ ಅಚ್ಚರಿ ಇಲ್ಲ ಎನ್ನುತ್ತವೆ ಮೂಲ.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಟಿಕೆಟ್‌ಗೆ ಬಿರುಸಿನ ಪೈಪೋಟಿ ಏರ್ಪಟ್ಟಿದ್ದು, ಹಾಲಿ ಸಂಸದ ನಳಿನ್ ಕುಮಾರ್ ಸಹಿತ ನಾಲ್ಕು ಮಂದಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇನ್ನು ನಾಲ್ಕನೇ ಬಾರಿ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹಾಗೂ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೆಸರು ಪರಿಶೀಲನೆಗೆ ಒಳಪಟ್ಟಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಬುಧವಾರ ನಡೆದ ಅಭ್ಯರ್ಥಿಗಳ ಆಯ್ಕೆ ಕುರಿತ ಸಭೆಯಲ್ಲಿ ಈ ನಾಲ್ಕು ಹೆಸರು ಚರ್ಚೆಗೆ ಬಂದಿದೆ. ಅಂತಿಮವಾಗಿ ಈ ನಾಲ್ವರ ಹೆಸರನ್ನು ಶಿಫಾರಸು ಮಾಡಿ ಸಂಸದೀಯ ಸಮಿತಿಗೆ ಕಳುಹಿಸಲಾಗಿದ್ದು, ಅಲ್ಲಿ ಒಬ್ಬರ ಹೆಸರು ಅಂತಿಮಗೊಂಡು ಘೋಷಣೆಯಾಗಲಿದೆ. ಇಲ್ಲವೇ ಬೇರೆಯೇ ಹೊಸ ಹೆಸರು ಘೋಷಣೆಯಾದರೂ ಅಚ್ಚರಿ ಇಲ್ಲ ಎನ್ನುತ್ತವೆ ಮೂಲ.ನಳಿನ್ ಕುಮಾರ್ ಹೆಸರು ಮುಂಚೂಣಿಯಲ್ಲಿ: ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆ ಕ್ಷೇತ್ರದಲ್ಲಿ ಪರ-ವಿರೋಧ ಚರ್ಚೆಗಳು ಇರುವುದು ಸಮಿತಿ ಸಭೆಯಲ್ಲಿ ಪ್ರಸ್ತಾಪಗೊಂಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅವರ ಸಾಧನೆ, ಸಂಘಟನೆಗೆ ಅವರ ಕೊಡುಗೆ, ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತನಾಗಿ ಸಲ್ಲಿಸಿದ ಸೇವೆ ಈ ಎಲ್ಲ ಅಂಶ ಚರ್ಚೆ ವೇಳೆ ಪ್ರಸ್ತಾಪಗೊಂಡಿದೆ ಎಂದು ಹೇಳಲಾಗಿದೆ. ಪುತ್ತೂರಿನಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು, ಅದು ಇತ್ಯರ್ಥಗೊಳ್ಳದೇ ಇದ್ದರೆ ಆಗಬಹುದಾದ ಪರಿಣಾಮಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ನಳಿನ್ ಕುಮಾರ್ ಕಟೀಲ್ ಪರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ದ.ಕ. ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಸಭೆಯಲ್ಲಿ ಬಲವಾದ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಲಾಗಿದೆ. ಕ್ಷೇತ್ರದಲ್ಲಿ ವಿರೋಧ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿತನವನ್ನು ಬದಲಾಯಿಸುವಂತೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಪಟ್ಟು ಹಿಡಿದಿದ್ದು, ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರೋಧ ವ್ಯಕ್ತಪಡಿಸಿದ ವಿದ್ಯಮಾನ ಹೇಳಲಾಗಿದೆ. ಇದೇ ವೇಳೆ ಸಂತೋಷ್ ಅವರು ಉಡುಪಿ ಹಾಗೂ ಉತ್ತರ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಬಗ್ಗೆಯೂ ಮಾತನಾಡಿದ್ದಾರೆ. ಹೀಗಾಗಿ ಅಭ್ಯರ್ಥಿ ಬದಲಾವಣೆ ವಿಚಾರ ಕೊನೆಯಲ್ಲಿ ಮರೆಗೆ ಸರಿಯಿತು ಎಂದು ಮೂಲಗಳು ತಿಳಿಸಿವೆ. ಕ್ಯಾ. ಚೌಟ, ಡಾ.ಭರತ್ ಶೆಟ್ಟಿ ಹೆಸರು: ನಳಿನ್ ಕುಮಾರ್ ಕಟೀಲ್ ಹೊರತುಪಡಿಸಿದರೆ ಕ್ಯಾ.ಬ್ರಿಜೇಶ್ ಚೌಟ ಹೆಸರು ಚರ್ಚೆಗೆ ಬಂದಿದೆ. ಈ ಹಿಂದೆಯೂ ಸಂಸದ ಸ್ಥಾನಕ್ಕೆ ಇವರು ಸ್ಪರ್ಧಾಕಾಂಕ್ಷಿ ಆಗಿದ್ದರು. ಈ ಬಾರಿ ಕೂಡ ಸಂಘಪರಿವಾರದಲ್ಲಿ ಇವರ ಹೆಸರು ಮುಂಚೂಣಿಯಲ್ಲಿದ್ದು, ರಾಜ್ಯ ಬಿಜೆಪಿ ಕೂಡ ಇವರ ಹೆಸರಿಗೆ ಉತ್ಸುಕತೆ ತೋರಿದೆ. ಆದರೆ ಇತ್ತೀಚೆಗೆ ಜಿಲ್ಲೆಯ ಕೆಲವು ಬಿಜೆಪಿ ಶಾಸಕರು ರಾಜ್ಯಾಧ್ಯಕ್ಷರ ಬಳಿ ತೆರಳಿ ಕ್ಯಾ.ಬ್ರಿಜೇಶ್ ಚೌಟರಿಗೆ ಟಿಕೆಟ್ ನೀಡುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿರುವುದು ಕೂಡ ಸಭೆಯಲ್ಲಿ ಚರ್ಚೆಗೆ ಬಂದಿದೆ. ಇವೆಲ್ಲದರ ನಡುವೆ ಪರ್ಯಾಯ ಅಭ್ಯರ್ಥಿಯಾಗಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೆಸರು ಕೂಡ ಚರ್ಚೆಗೆ ಬಂದಿದೆ. ಡಾ.ಭರತ್ ಶೆಟ್ಟಿ ಅವರು ಉನ್ನತ ಮಟ್ಟದಲ್ಲಿ ಸದ್ದಿಲ್ಲದೆ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಲಾಗಿದೆ. ಅರುಣ್ ಶ್ಯಾಮ್ ಹೆಸರೂ ಪ್ರಸ್ತಾಪ!ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿರುವ ಬೆಂಗಳೂರಿನ ಹಿರಿಯ ನ್ಯಾಯವಾದಿ ದ.ಕ. ಮೂಲದ ಅರುಣ್ ಶ್ಯಾಮ್ ಹೆಸರು ಕೂಡ ಸಭೆಯಲ್ಲಿ ಪ್ರಸ್ತಾಪಗೊಂಡಿದೆ. ಬಿಜೆಪಿ ಹಾಗೂ ಸಂಘಪರಿವಾರದ ಕೋರ್ಟ್ ಕೇಸುಗಳ ವಕಾಲತ್ತು ವಹಿಸಿ ಜನಾನುರಾಗಿ ಆಗಿರುವ ಅರುಣ್ ಶ್ಯಾಮ್ ಹೆಸರೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಸಂಘಪರಿವಾರದ ಹಿರಿಯರು ಅರುಣ್ ಶ್ಯಾಮ್ ಹೆಸರು ಮುನ್ನಲೆಗೆ ಬಂದಿದೆ ಎಂದು ಹೇಳಲಾಗಿದೆ.ಇವೆಲ್ಲದರ ನಡುವೆ ದ.ಕ. ಕ್ಷೇತ್ರಕ್ಕೆ ಆಕಾಂಕ್ಷಿಗಳ ಪೈಕಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಜೈಶಂಕರ್, ತಮಿಳ್ನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡ ಕೇಶವ ಬಂಗೇರ, ದ.ಕ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರುಗಳೂ ಕೇಳಿಬರಲಾರಂಭಿಸಿದೆ.