ಸಾರಾಂಶ
ಹಾಲು ಒಕ್ಕೂಟದ ಆಡಳಿತ ಮಂಡಳಿಯ ಒಟ್ಟು 16 ಸ್ಥಾನಗಳಿಗೆ ನಡೆದ ಪೈಪೋಟಿಯ ಚುನಾವಣೆಯಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಬಳಗದಲ್ಲಿ ಗುರುತಿಸಿಕೊಂಡ 13 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಿದ 8 ಮಂದಿಯೂ ಜಯ ಗಳಿಸಿದ್ದಾರೆ. ಕೇವಲ 3 ಸ್ಥಾನಗಳು ಸಹಕಾರ ಭಾರತಿ ಪಾಲಾಗಿವೆ.
ಸೋಲುಂಡ ಸಹಕಾರ ಭಾರತಿ ಟೀಂ, ರಾಜೇಂದ್ರ ಕುಮಾರ್ ಬಳಗಕ್ಕೆ 13 ಸ್ಥಾನ, ಸಹಕಾರ ಭಾರತಿಗೆ ಮೂರು
ಕನ್ನಡಪ್ರಭ ವಾರ್ತೆ ಮಂಗಳೂರುಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಎಂದು ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ನಿ.)ದ ಮುಂದಿನ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಹಕಾರ ರಂಗದ ದಿಗ್ಗಜ ‘ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದ ಬಳಗಕ್ಕೆ ಭರ್ಜರಿ ಗೆಲುವು ಲಭಿಸಿದೆ.ಹಾಲು ಒಕ್ಕೂಟದ ಆಡಳಿತ ಮಂಡಳಿಯ ಒಟ್ಟು 16 ಸ್ಥಾನಗಳಿಗೆ ನಡೆದ ಪೈಪೋಟಿಯ ಚುನಾವಣೆಯಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಬಳಗದಲ್ಲಿ ಗುರುತಿಸಿಕೊಂಡ 13 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಿದ 8 ಮಂದಿಯೂ ಜಯ ಗಳಿಸಿದ್ದಾರೆ. ಕೇವಲ 3 ಸ್ಥಾನಗಳು ಸಹಕಾರ ಭಾರತಿ ಪಾಲಾಗಿವೆ.ರಾಜೇಂದ್ರ ಕುಮಾರ್ ಬಳಗದ ದೇವಿಪ್ರಸಾದ್ ಶೆಟ್ಟಿ, ರವಿರಾಜ ಹೆಗ್ಡೆ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉದಯ ಎಸ್. ಕೋಟ್ಯಾನ್, ಸುಧಾಕರ್ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಕೆ. ಶಿವಮೂರ್ತಿ, ಸುಚರಿತ ಶೆಟ್ಟಿ, ನಂದರಾಮ್ ರೈ, ಎಸ್. ಬಿ. ಜಯರಾಮ ರೈ, ಚಂದ್ರಶೇಖರ ರಾವ್, ಎಚ್. ಪ್ರಭಾಕರ್, ಮಮತಾ ಆರ್. ಶೆಟ್ಟಿ ಜಯ ಗಳಿಸಿದ್ದಾರೆ. ಆಯ್ಕೆಗೊಂಡ ಎಲ್ಲರಿಗೂ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.ಒಕ್ಕೂಟದಲ್ಲಿ 2009ರವರೆಗಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದ್ದರೆ, 2009 ಹಾಗೂ 2014ರಲ್ಲಿ ಅವಿರೋಧ ಆಯ್ಕೆ ನಡೆದು ಸಹಕಾರ ಭಾರತಿ ಬೆಂಬಲಿಗರು ಆಡಳಿತ ನಡೆಸಿದ್ದರು. ಈ ಬಾರಿ ಅವಿರೋಧ ಆಯ್ಕೆಗೆ ಭಾರಿ ಕಸರತ್ತು ನಡೆಸಿದರೂ, ಒಮ್ಮತದ ಆಯ್ಕೆ ಸಾಧ್ಯವಾಗದೆ ಚುನಾವಣೆ ನಡೆದಿದೆ.
ಬಂಡಾಯ ‘ಬಾವುಟ’ ಹಾರಿಸಿದ ಸುಚರಿತ ಶೆಟ್ಟಿ:ನಿಕಟಪೂರ್ವ ಅಧ್ಯಕ್ಷ ಸುಚರಿತ ಶೆಟ್ಟಿ ಅವರಿಗೆ ಈ ಬಾರಿ ಸಹಕಾರ ಭಾರತಿಯಿಂದ ಸ್ಪರ್ಧೆಗೆ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ವಿರೋಧಿಸಿ ಸುಚರಿತ ಶೆಟ್ಟಿ ಡಾ.ಎಂಎನ್‌ಆರ್ ಬಳಗದ ಮೂಲಕ ಸವಾಲೊಡ್ಡಿ ಗೆದ್ದು ಬೀಗಿದ್ದಾರೆ. ಒಕ್ಕೂಟದ ಮಾಜಿ ಅಧ್ಯಕ್ಷ ರವಿರಾಜ ಎನ್. ಶೆಟ್ಟಿ ವಿಜಯ ಪತಾಕೆ ಹಾರಿಸಿದರೆ, ಕಾಪು ದಿವಾಕರ ಶೆಟ್ಟಿ ಪರಾಭವಗೊಂಡಿದ್ದಾರೆ.
---------ಗೆದ್ದವರು ಯಾರು?:
ಕುಂದಾಪುರ ವಿಭಾಗ: ರವಿರಾಜ ಹೆಗ್ಡೆ (ಪಡೆದ ಮತಗಳು- 220), ಎಸ್.ಪ್ರಕಾಶ್ಚಂದ್ರ ಶೆಟ್ಟಿ (185), ಉದಯ ಎಸ್. ಕೋಟ್ಯಾನ್ (172), ದೇವಿಪ್ರಸಾದ್ ಶೆಟ್ಟಿ ಬೆಳಪು (164), ಸುಧಾಕರ ಶೆಟ್ಟಿ (162), ಎನ್.ಮಂಜಯ್ಯ ಶೆಟ್ಟಿ (145), ಕೆ.ಶಿವಮೂರ್ತಿ (124), ಉಡುಪಿ ಜಿಲ್ಲಾ ಮಹಿಳಾ ಸ್ಥಾನ: ಮಮತಾ ಆರ್.ಶೆಟ್ಟಿ (190), ಮಂಗಳೂರು ಉಪ ವಿಭಾಗ: ಸುಚರಿತ ಶೆಟ್ಟಿ (99), ನಂದರಾಮ್ ರೈ (96), ಬಿ.ಸುಧಾಕರ ರೈ (97), ಪುತ್ತೂರು ಉಪವಿಭಾಗ: ಎಸ್.ಬಿ. ಜಯರಾಮ ರೈ (190), ಭರತ್ ಎನ್. (173), ಕೆ.ಚಂದ್ರಶೇಖರ ರಾವ್ (169), ಎಚ್.ಪ್ರಭಾಕರ (157), ದ.ಕ. ಜಿಲ್ಲಾ ಮಹಿಳಾ ಸ್ಥಾನ: ಸವಿತಾ ಎನ್.ಶೆಟ್ಟಿ (235).