ಸಾರಾಂಶ
ಇಂದೂ ಇದೆ ರೆಡ್ ಅಲರ್ಟ್, 5ಕ್ಕೂ ಅಧಿಕ ಮನೆಗಳು ಜಖಂಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮುಂಗಾರು ಪೂರ್ವ ಮಳೆ ಕೊಂಚ ಇಳಿಮುಖವಾದರೂ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 5ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ. ಹವಾಮಾನ ಇಲಾಖೆ ಗುರುವಾರವೂ ರೆಡ್ ಅಲರ್ಟ್ ಘೋಷಿಸಿದೆ.ಜಿಲ್ಲೆಯಲ್ಲಿ 2 ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿದ್ದರೆ, ಮೂರು ಮನೆಗಳು ಭಾಗಶಃ ಜಖಂಗೊಂಡಿವೆ. ನೀರು ಮಾರ್ಗ ಗ್ರಾಮ ಪಂಚಾಯಿತಿಯ ಬೊಂಡಂತಿಲ ಗ್ರಾಮದ ದೇವಕಿ ಎಂಬವರ ಮನೆಗೆ ಹಾನಿ ಉಂಟಾಗಿದ್ದರೆ, ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಾಲಯದ ನಾಗಬನ ಸಮೀಪದ ತಡೆಗೋಡೆ ಕುಸಿದಿದೆ. ದ.ಕ. ಜಿ.ಪಂ. ಕಚೇರಿ ಎದುರಿನ ಮಿಯಾವಾಕಿ ಅರಣ್ಯದೊಳಗಿನ ಮರ ಉರುಳಿ ವಿದ್ಯುತ್ ಸಂಪರ್ಕ ಕೆಲಕಾಲ ವ್ಯತ್ಯಯವಾಗಿತ್ತು.
ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ಒಟ್ಟು 60 ವಿದ್ಯುತ್ ಕಂಬಗಳು, ಒಂದು ಟ್ರಾನ್ಸ್‌ಫಾರ್ಮರ್‌ಗೆ ಹಾನಿ ಸಂಭವಿಸಿದೆ.61.8 ಮಿ.ಮೀ. ಮಳೆ:
ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ಸರಾಸರಿ 61.8 ಮಿ.ಮೀ. ಮಳೆ ದಾಖಲಾಗಿದೆ. ಮೂಲ್ಕಿ ಭಾಗದಲ್ಲಿ ಅತಿ ಹೆಚ್ಚು 96 ಮಿಮೀ ಮಳೆಯಾಗಿದ್ದರೆ, ಬೆಳ್ತಂಗಡಿಯಲ್ಲಿ 60.4 ಮಿಮೀ, ಬಂಟ್ವಾಳ 65.8 ಮಿಮೀ, ಮಂಗಳೂರು 85.5 ಮಿಮೀ, ಪುತ್ತೂರು 48.1 ಮಿಮೀ, ಸುಳ್ಯ 48.4 ಮಿಮೀ, ಮೂಡುಬಿದಿರೆ 90.9 ಮಿಮೀ, ಕಡಬ 48.6 ಮಿಮೀ, ಉಳ್ಳಾಲದಲ್ಲಿ 88.9 ಮಿಮೀ ಮಳೆಯಾಗಿದೆ.ಗುರುವಾರ ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅದರ ಬಳಿಕ 5 ದಿನ ಜಿಲ್ಲೆಗೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
---------ಕಡಲ ತಡಿ ಪ್ರಕ್ಷುಬ್ಧಕಡಲ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಡಿಯುತ್ತಿದ್ದು, ಗಾಳಿಯ ರಭಸವೂ ಜೋರಾಗಿದೆ. ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಪ್ರವಾಸಿಗರನೇಕರು ಕಡಲಿಗಿಳಿದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ದೃಶ್ಯ ಉಚ್ಚಿಲ ಕಡಲ ತೀರದಲ್ಲಿ ಕಂಡುಬಂತು.
ಉಳ್ಳಾಲದ ಉಚ್ಚಿಲ, ಬಟ್ಟಪ್ಪಾಡಿ ಕಡಲ ತಡಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದು, ತೀರ ಪ್ರದೇಶದ ನಿವಾಸಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಕಡಲ್ಕೊರೆತದ ಅಪಾಯವೂ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್, ಹೋಂ ಸ್ಟೇಗಳ ಪ್ರವಾಸಿಗರಿಗೆ ಸಮುದ್ರ ತೀರಕ್ಕೆ ಬರದಂತೆ ಸೂಚನೆ ನೀಡಲಾಗಿದೆ.