ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿದ್ದರೂ ಅವರನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ.
ಹೊಸಪೇಟೆ: ಸಿಎಂ ಡಿ.ಕೆ. ಶಿವಕುಮಾರ ಸ್ಟಿಂಗ್ ಆಪರೇಶನ್ ಪಿತಾಮಹ ಆಗಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಈಶಾನ್ಯ ಶಿಕ್ಷಕರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ,ಮತಯಾಚನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಮಾಡಿಯೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡದಿದ್ದರೆ ಸಿದ್ದರಾಮಯ್ಯ ರಾಜಿನಾಮೆ ಕೊಡುತ್ತಿರಲಿಲ್ಲ. ಸಿದ್ದರಾಮಯ್ಯ ಅವರಿಂದ ಅಧಿಕಾರ ಕಿತ್ತುಕೊಳ್ಳುವುದಕ್ಕೆ ಈ ಪ್ಲಾನ್ ಸಿಎಂ ಡಿ.ಕೆ.ಶಿವಕುಮಾರ ಮಾಡಿದ್ದಾರೆ ಎಂದರು.ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿದ್ದರೂ ಅವರನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಅವರ ಹೆಸರು ಕೆಡಿಸುವ ಕೆಲಸ, ಅಪಪ್ರಚಾರ ಮಾಡುವುದು ಯಾಕೆ ಬೇಕು ? ನಿಜವಾಗಲೂ ಸಿದ್ದರಾಮಯ್ಯ ಅವರಿಗೆ ನ್ಯಾಯ ಕೊಡಿಸುವ ಆಸಕ್ತಿ ಇದ್ದರೆ ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ ಎಂದು ನಾವು ಒತ್ತಾಯಿಸುತ್ತಿದ್ದೇವೆ. ಅದಕ್ಕೆ ಅವರು ಒಪ್ಪುತ್ತಿಲ್ಲ, ಯಾರ ಮೂಲಕ ತನಿಖೆ ಮಾಡಬೇಕು ಎಂದು ಚರ್ಚೆಗೆ ಬಂದಾಗ ಇಬ್ಬರು ಮಂತ್ರಿಗಳು ಮಾತ್ರ ಮಾತನಾಡಿದ್ದು ಬಿಟ್ಟರೆ ಉಳಿದವರು ಯಾರೂ ಮಾತನಾಡಿಲ್ಲ.ಎಲ್ಲರೂ ಮೌನದಲ್ಲಿದ್ದರು. ಅವರಿಗೆಲ್ಲ ಡಿ.ಕೆ. ಶಿವಕುಮಾರ್ ಹೆದರಿಕೆ ನಮ್ದು ಎಲ್ಲಿ ಸ್ಟಿಂಗ್ ಮಾಡಿದ್ದಾನೆಂದು ಭಯದಲ್ಲಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸದೇ ರಾಹುಲ್ ಗಾಂಧಿ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಯತ್ನ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ 15 ದಿನ ಭಾರತದಲ್ಲಿದ್ದರೆ ಇನ್ನೂ 15 ದಿನ ವಿದೇಶದಲ್ಲಿರುತ್ತಾರೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಸೋತಾಗ ಇವಿಎಂ, ಎಸ್ಐಆರ್ ಹಾಗೂ ಮತ ಚೋರಿ ಆರೋಪ ಮಾಡುವುದು ಕಾಂಗ್ರೆಸ್ ನಾಯಕರ ಪ್ರವೃತ್ತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಬ್ಬಿನ ಬೆಲೆ ನಿಗದಿಯಲ್ಲಿ ಕೇಂದ್ರ ಸರ್ಕಾರದಷ್ಟೆ ರಾಜ್ಯ ಸರ್ಕಾರದ ಪಾತ್ರ ಇದೆ. ಆದರೆ ರಾಜ್ಯ ಸರ್ಕಾರ ನುಣಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಕೇಂದ್ರದಿಂದ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ರಾಜ್ಯ ಸರ್ಕಾರ ತನ್ನ ಕೆಲಸ ಮಾಡಲಿ. ಬರ ಪರಿಹಾರ ನೀಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ಜಿ.ನಮೋಶಿ ಪರ ಉತ್ತಮ ವಾತಾವರಣ ಇದೆ. ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ನಮೋಶಿ ಉತ್ತಮ ಕೆಲಸ ಮಾಡಿದ್ದಾರೆ. ಶಿಕ್ಷಕರು ಅದನ್ನು ಮರೆತಿಲ್ಲ.ಈ ಹಿನ್ನೆಲೆ ನಮೋಶಿ ಐದನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಆನಂದ್ ಸಿಂಗ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಅಶೋಕ ಜೀರೆ, ಚನ್ನಬಸವನಗೌಡ ಪಾಟೀಲ್, ಅಯ್ಯಳ್ಳಿ ತಿಮ್ಮಪ್ಪ, ಎಸ್. ಕೃಷ್ಣ ನಾಯ್ಕ್, ಬಲ್ಲಹುಣಸಿ ರಾಮಣ್ಣ, ಬಿ.ಎಂ. ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.