ಮಾಗಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಲಭಿಸಬೇಕು, ಅವರ ಹೋರಾಟಕ್ಕೆ ಪ್ರತಿಫಲ ಸಿಗಲಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಅವರಿಗೂ ಸಿಎಂ ಸ್ಥಾನ ಸಿಗಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಮಾಗಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಲಭಿಸಬೇಕು, ಅವರ ಹೋರಾಟಕ್ಕೆ ಪ್ರತಿಫಲ ಸಿಗಲಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಅವರಿಗೂ ಸಿಎಂ ಸ್ಥಾನ ಸಿಗಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ತಾಲೂಕಿನ ಅಜ್ಜನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಾವೆಲ್ಲ ಬೇರೆ ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬಂವರು. ಡಿ.ಕೆ.ಶಿವಕುಮಾರ್‌ ಮೂಲ ಕಾಂಗ್ರೆಸ್ಸಿಗರು. ಅವರಿಗೂ ಸಿಎಂ ಸ್ಥಾನ ಸಿಕ್ಕರೆ ಜನರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಬಹುದು ಎಂದು ಹೇಳಿದರು.

ಬಿಡದಿ ಟೌನ್‌ಶಿಪ್ ಕುಮಾರಸ್ವಾಮಿಯೇ ತಡೀಬಹುದಿತ್ತು:

2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಬಿಡದಿ ಟೌನ್‌ಶಿಪ್‌ಗೆ ಚಾಲನೆ ನೀಡಿದ್ದು, ಆಗಲೇ ಅವರೇ ಯೋಜನೆಯನ್ನು ತಡೆಯಬಹುದಾಗಿತ್ತಲ್ಲ. ಈಗ ಟೌನ್‌ಶಿಪ್‌ನಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಶೇ.50ರಷ್ಟು ಪರಿಹಾರ ಕೊಡಲಾಗುತ್ತಿದೆ. ಬಿಡದಿ ಟೌನ್‌ ಶಿಪ್ ವಿಚಾರವಾಗಿ ರೈತರಿಂದ ಅರ್ಜಿ ಸ್ವೀಕರಿಸುವಾಗ ಕೆಲವರು ಯೋಜನೆ ಬೇಡ ಎಂದು ವಿರೋಧಿಸಿದರು. ಅದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ. ಗಲಾಟೆ ಆಗಿಲ್ಲ, ಸುಮ್ಮನೆ ಅಪಪ್ರಚಾರ ಮಾಡಲಾಗಿದೆ. ಒಂದು ಯೋಜನೆ ಕಾರ್ಯಗತಗೊಳಿಸಲು ಪರ ವಿರೋಧ ಎರಡು ಇರುತ್ತದೆ ಎಂದು ಹೇಳಿದರು.

ಒಳ್ಳೇ ಯೋಜನೆ ಎಂದಿದ್ದ ಎಚ್ಡಿಕೆ:

ಕುಮಾರಸ್ವಾಮಿಯೇ ಮುಖ್ಯಮಂತ್ರಿಗಳಾಗಿದ್ದಾಗ ಇದು ಒಳ್ಳೆಯ ಯೋಜನೆ ಎಂದು ಕಂಚಗಾರನಹಳ್ಳಿ, ಬೈರಮಂಗಲದಲ್ಲಿ ಹೇಳಿಕೆ ಕೊಟ್ಟಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಯೋಜನೆ ಕೈಬಿಡಬಹುದಾಗಿತ್ತು. ಯಾಕೆ ಬಿಡಲಿಲ್ಲ ಗೊತ್ತಿಲ್ಲ. ಆಗ ಅವರು ಶೇ‌.40ರಷ್ಟು ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದರು. ಈಗ ನಾವು ಶೇ.50ರಷ್ಟು ಪರಿಹಾರ ಕೊಡುತ್ತಿದ್ದೇವೆ. ಶೇ.45ರಷ್ಟು ಕಮರ್ಷಿಯಲ್ ಆಗಿ ಬಳಸಿಕೊಳ್ಳಲು ಅವಕಾಶ ಕೊಡಲಾಗುತ್ತದೆ. ಜತೆ ಒಂದು ಎಕರೆಗೆ ಎರಡು ಕೋಟಿ ಮೇಲೆ ಪರಿಹಾರ ಕೊಡುತ್ತಿದ್ದೇವೆ. ಅಧಿಕಾರಿಗಳ ಜೊತೆ 2 ಕೋಟಿ ಪರಿಹಾರ ಬೇಕು ಎಂದು ಒತ್ತಡ ಹಾಕುತ್ತಿದ್ದೇವೆ ಎಂದರು.

ಯಾರು ಎಲ್ಲಿ ಬೇಕಾದರು ಸ್ಪರ್ಧಿಸಲಿ:

ಮತ್ತೆ ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಬರ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ವಿಶೇಷವಾಗಿ ಕುಮಾರಸ್ವಾಮಿ ಅವರನ್ನೇ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದೀರಾ, ಬೇರೆಯವರು ಬರಬಹುದು. ಕುಮಾರಸ್ವಾಮಿ ಅವರು ಒಂದು ಬಾರಿ ಇಲ್ಲೇ ಇರುತ್ತಾರೆ, ಇನ್ನೊಂದು ಬಾರಿ ಲೋಕಸಭೆಗೆ ಹೋಗುತ್ತಾರೆ. ಅವರನ್ನು ಯಾರು ಪ್ರಶ್ನೆ ಮಾಡುವಂತೆ ಇಲ್ಲ. ಮಂಡ್ಯದಲ್ಲಿ ಗೆದ್ದಿದ್ದಾರೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದಾರೆ ಈಗ ರಾಮನಗರದಲ್ಲಿ ಸ್ಪರ್ಧೆ ಮಾಡುತ್ತೇನೆಂದು ಹೇಳುತ್ತಿದ್ದಾರೆ. ಯಾರು ಬೇಕಾದರೂ ರಾಜ್ಯ ರಾಜಕಾರಣಕ್ಕೆ ಬರಲಿ, ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಕುಮಾರಸ್ವಾಮಿ ರಾಮನಗರದಲ್ಲಿ ಶಾಸಕರಾಗಿದ್ದಾಗ ಎಷ್ಟು ಅಭಿವೃದ್ಧಿಯಾಗಿದೆ? ಈಗಿನ ಶಾಸಕ ಇಕ್ಬಾಲ್ ಹುಸೇನ್ ಶಾಸಕರಾದ ಮೇಲೆ ಎಷ್ಟು ಅಭಿವೃದ್ಧಿಯಾಗಿದೆ ಎಂಬುದು ಜನತೆ ನೋಡುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ತಾಪಂ ಇಒ ಜೈಪಾಲ್, ಬಿಇಒ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಜೆ.ಪಿ.ಚಂದ್ರೇಗೌಡ, ಬಿ.ಟಿ.ವೆಂಕಟೇಶ್ ಇತರರು ಹಾಜರಿದ್ದರು.