ಸಾರಾಂಶ
ತುರುವೇಕೆರೆ : ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಇತರೆ ಸಮುದಾಯದ ಪ್ರಭಾವಿ ನಾಯಕರು, ಸಚಿವರು ತಡೆಯುತ್ತಿದ್ದಾರೆಂದು ಒಕ್ಕಲಿಗ ಸಮುದಾಯದ ಪ್ರಭಾವಿ ಜೆಡಿಎಸ್‌ನ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಪಟ್ಟಣದ ಎಸ್.ಎ.ಸಿ ಮಯೂರ ವಿದ್ಯಾಲಯದ ಶಾಲಾ ಆವರಣದಲ್ಲಿ ನಡೆದ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ನ ತಾಲೂಕು ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಬಹುಸಂಖ್ಯಾತವಾಗಿರುವ ನಮ್ಮ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿರುವ ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಮುಖ್ಯಮಂತ್ರಿಯ ಸರತಿ ಸಾಲಿನಲ್ಲಿರುವ ಡಿ.ಕೆ.ಶಿವಕುಮಾರ್ ಗೆ ಇನ್ನಿತರೆ ಸಮುದಾಯಕ್ಕೆ ಸೇರಿದ ಪ್ರಮುಖರು ಸಿಎಂ ಆಗಲು ತೊಡರುಗಾಲು ಹಾಕುತ್ತಿದ್ದಾರೆಂದು ಬೇಸರಿಸಿದರು.ಸಮುದಾಯದ ಹಿತ:
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಅವಕಾಶ ಬಂದರೆ ತಾವು ಪಕ್ಷ ನೋಡದೇ ತಮ್ಮ ಸಮುದಾಯದ ಪರ ಬ್ಯಾಟಿಂಗ್ ಮಾಡುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಘೋಷಿಸಿದರು.ಒಕ್ಕಲಿಗ ವಿರೋಧಿ:
ಈಗ ಆಡಳಿತದಲ್ಲಿರುವ ಸರ್ಕಾರ ಒಕ್ಕಲಿಗರ ವಿರೋಧಿ ಸರ್ಕಾರವಾಗಿದೆ. ಒಕ್ಕಲಿಗ ಸಮುದಾಯದವರು ಯಾವುದೇ ಕ್ಷೇತ್ರದಲ್ಲಿ ಬೆಳೆಯದಂತೆ ನೋಡಿಕೊಳ್ಳುತ್ತಿದೆ. ಉನ್ನತ ಅಧಿಕಾರದಲ್ಲಿ ಒಕ್ಕಲಿಗರು ಇಲ್ಲದಾಗಿದ್ದಾರೆ. ಇದಕ್ಕಿಂತ ಕೆಟ್ಟ ಅನುಭವ ಇದುವರೆಗೂ ನಾನು ನೋಡಿರಲಿಲ್ಲ ಎಂದು ಕೃಷ್ಣಪ್ಪ ಕಿಡಿಕಾರಿದರು.ಹೋರಾಟ:
ನಮ್ಮ ಒಕ್ಕಲಿಗ ಸಮುದಾಯಕ್ಕೆ ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾದರೆ ತಾವು ಪಕ್ಷಾತೀತವಾಗಿ ಹೋರಾಟ ಮಾಡಲು ಸಿದ್ಧ. ಕೈ ಕಟ್ಟಿ ಕೂರು ಪ್ರಶ್ನೆಯೇ ಇಲ್ಲ. ರಾಜಕೀಯಕ್ಕಿಂತ ತಮ್ಮ ಸಮುದಾಯದ ಹಿತಕಾಯುವುದು ಮುಖ್ಯ. ಸಮುದಾಯವಿದ್ದರೆ ಮಾತ್ರ ನಾವು ಇರಲು ಸಾಧ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಘಂಟಾಘೋಷವಾಗಿ ಹೇಳಿದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದರೆ ಬದುಕೇ ಇಲ್ಲ ಎನ್ನುವ ಮಟ್ಟಿಗೆ ಸಮಾಜ ಬಂದಿತು ನಿಂತಿದೆ. ಸಮುದಾಯದ ಯುವಕರು ವೈಜ್ಞಾನಿಕ ಉಳುಮೆಯೊಂದಿಗೆ ಉದ್ಯಮಶೀಲರಾಗಿ ನೂರಾರು ಜನರಿಗೆ ಉದ್ಯೋಗ ಕೊಡುವಂತೆ ಬೆಳೆಯಬೇಕು ಎಂದು ಆಶಿಸಿದರು.
ಸಮುದಾಯದ ರೈತರು ತಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಬೇಕು. ಸಾಂಪ್ರದಾಯಿಕ ಕೃಷಿಗಿಂತ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡು ಉತ್ಪಾದನಾ ಕ್ಷೇತ್ರವನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಶಿಕ್ಷಣ ವಲಯದಲ್ಲಿ ಪೈಪೋಟಿ ಇರುವುದರಿಂದ ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕು. ಒಕ್ಕಲಿಗದ ಸಮುದಾಯದ ಸಂಘ ಸಂಸ್ಥೆಗಳ ಸೇವೆ ಒಂದೇ ಜಾತಿಗೆ ಸೀಮಿತಗೊಳ್ಳದೆ ಎಲ್ಲ ಸಮುದಾಯಗಳ ಏಳಿಗೆಗೂ ಶ್ರಮಿಸುವ ಮೂಲಕ ಈ ಸಮುದಾಯದ ಜಾತ್ಯಾತೀತತೆಯ ಮನೋಭಾವವನ್ನು ಮೆರೆಯೋಣ ಎಂದರು.
ದೊಡ್ಡಬಳ್ಳಾಪುರದ ಹಿರಿಯ ಸಾಹಿತಿ ಎಂ.ಬಿ.ಚಂದ್ರಶೇಖರಯ್ಯ ಮಾತನಾಡಿ , ದೈಹಿಕ ಮತ್ತು ಬೌದ್ಧಿಕ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ನೇಗಿಲ ಯೋಗಿಯು ಇಂದು ಕೌಟುಂಬಿಕ, ಔದ್ಯೋಗಿಕ ಸೇರಿದಂತೆ ಹಲವು ಬಿಕ್ಕಟ್ಟಿಗಳನ್ನು ಎದುರಿಸುತ್ತಿದ್ದಾನೆ. ಎಲ್ಲ ವರ್ಗದ ದುಡಿಮೆಗಾರರ ಸ್ಥಿತಿ ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ನರಳುತ್ತಿದೆ. ರೈತ ತನ್ನ ವೃತ್ತಿ ಆಯಾಮಗಳಲ್ಲಿ ಪರಿವರ್ತನೆಗಳನ್ನು ಕಂಡುಕೊಳ್ಳದಿದ್ದರೆ ಗ್ರಾಮೀಣ ಕೃಷಿ ಸಂಸ್ಕೃತಿಯ ಅಸ್ಮಿತೆ ಕಣ್ಮರೆಯಾಗಲಿದೆ. ಒಕ್ಕಲಿಗ ಸಮುದಾಯದವರು ಕೃಷಿಯ ಜೊತೆ ಜೊತೆಯಲ್ಲೇ ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ತಮ್ಮ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಆಲದಹಳ್ಳಿ ಸುಧಾಕರ್, ಪ್ರೊ.ಪುಟ್ಟರಂಗಪ್ಪ, ವಿಜಯಲಕ್ಷ್ಮಿ ವಿಶ್ವೇಶ್ವರಯ್ಯ, ದೊಡ್ಡೇರಿ ಕೆಂಪಯ್ಯ, ಎನ್.ದೇವರಾಜ್, ಹುಲಿಕೆರೆ ಪ್ರಕಾಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್ ಸೇರಿದಂತೆ ಹಲವರನ್ನು ಅಭಿನಂದಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ನೇಗಿಲ ಯೋಗಿ ಸಂಘಟನೆಯ ದಿನದರ್ಶಿನಿಯನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ನೇಗಿಲ ಯೋಗಿ ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್.ರಂಗನಾಥ್, ರೇಷ್ಮೆ ಇಲಾಖೆಯ ಆಯುಕ್ತರಾದ ಎಂ.ಬಿ.ರಾಜೇಶ್ ಗೌಡ, ಮೈಸೂರು ನೇಗಿಲ ಯೋಗಿ ಸೇವಾ ಸಮಾಜದ ಅಧ್ಯಕ್ಷ ಡಿ.ರವಿಕುಮಾರ್, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಸಂಘದ ಗೌರವಾಧ್ಯಕ್ಷ ಡಾ.ನವೀನ್, ಗೌರವ ಸಲಹೆಗಾರ ಪ್ರೊ.ಪುಟ್ಟರಂಗಪ್ಪ, ಸಂಚಾಲಕರಾದ ಡಾ.ಬಿ.ಚೌದ್ರಿನಾಗೇಶ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ತುಕಾರಾಮ್, ಖಜಾಂಚಿ ವೇಣುಗೋಪಾಲ್ ಮತ್ತಿತರರು ಇದ್ದರು. 15 ಟಿವಿಕೆ 1 - ತುರುವೇಕೆರೆ ಪಟ್ಟಣದ ಎಸ್.ಎ.ಸಿ ಮಯೂರ ವಿದ್ಯಾಲಯದ ಶಾಲಾ ಆವರಣಲ್ಲಿ ನೇಗಿಲ ಯೋಗಿ ತಾಲೂಕು ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.