ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಸೋಲಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ತಂಡ ಕಾರಣ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರೆಯಬೇಕೆಂಬ ಕಾರಣದಿಂದ ಅವರ ಪರವಾಗಿ ಅಹಿಂದ ಟೀಮ್ ಯಾವಗಲೂ ಕೆಲಸ ಮಾಡುತ್ತದೆ. ಸಿದ್ದರಾಮಯ್ಯ ಹಾಗೂ ಅಹಿಂದ ಟೀಮ್ ಸೇರಿಕೊಂಡು ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ ಎಂದರು.
ಮತದಾನಕ್ಕೂ ಮೊದಲೇ ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ, ಸಿದ್ದರಾಮಯ್ಯ ಇಷ್ಟೂ ಜನ ಸೇರಿ ಡಿಕೆ ಸುರೇಶ್ ಅವರನ್ನು ಸೋಲಿಸುತ್ತಾರೆಂದು ಹೇಳಿದ್ದೆ. ಆಗ ನಾನು ಹೇಳಿದ್ದು ಈಗ ರಿಪೀಟ್ ಆಗಿದೆ. ಚುನಾವಣೆಗೂ ಮೊದಲೇ ಬೆಂಗಳೂರು ಗ್ರಾಮಾಂತರದಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರನ್ನು ಸೋಲಿಸುತ್ತಾರೆಂದು ಹೇಳಿದ್ದೆ. ಅದಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದು ಸಂಚಿನ ಒಂದು ಭಾಗ ಎಂದು ಹೇಳಿದರು.ಡಿಕೆ ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿ ಆಗಬಾರದು ಎಂಬ ಕಾರಣಕ್ಕೆ ಹಾಗೂ ಅವರ ನೈತಿಕತೆ ಕುಸಿಯಬೇಕು ಎಂದು ಡಿಕೆ ಸುರೇಶ್‌ರನ್ನು ಸೋಲಿಸಿದ್ದಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ, ಜೊತೆಗೆ ಈ ಸರ್ಕಾರ ಕೂಡ ಉಳಿಯುವುದಿಲ್ಲ ಎಂದರು.ಇಲ್ಲಿಂದ ರಾಜಕೀಯ ಧ್ರುವೀಕರಣ ಪ್ರಾರಂಭವಾಗುತ್ತದೆ. ಕಾಂಗ್ರೆಸ್‌ನಲ್ಲಿ ಒಳಜಗಳ ಶುರುವಾಗುತ್ತದೆ. ಈಗಾಗಲೇ ಬೆಳಗಾವಿಯಲ್ಲಿ ಕಿತ್ತಾಟ ಶುರುವಾಗಿದ್ದು, ಈಗ ಬೆಂಗಳೂರು ಗ್ರಾಮಾಂತರದ ಸೋಲಿನಿಂದ ಇಲ್ಲಿಯೂ ಕೂಡ ಜಗಳ ಶುರುವಾಗಿದೆ. ಸರ್ಕಾರ ಕೂಡ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.